×
Ad

ಅಯೋಧ್ಯೆಯಲ್ಲಿ ರಾಜ್ಯ ಯಾತ್ರಾರ್ಥಿಗಳಿಗೆ ಕರ್ನಾಟಕ ಭವನ ನಿರ್ಮಿಸಿ: ಉಡುಪಿ ಶಾಸಕ ಮನವಿ

Update: 2024-01-11 19:03 IST

ಯಶ್‌ಪಾಲ್ ಸುವರ್ಣ

ಉಡುಪಿ: ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಭೇಟಿ ನೀಡುವ ರಾಜ್ಯದ ಕೋಟ್ಯಾಂತರ ಭಕ್ತರ ಅನುಕೂಲಕ್ಕಾಗಿ ರಾಜ್ಯ ಸರಕಾರ ಸುಸಜ್ಜಿತ ಕರ್ನಾಟಕ ಭವನ ನಿರ್ಮಿಸುವಂತೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರವೊಂದನ್ನು ಬರೆದಿರುವ ಯಶಪಾಲ್ ಸುವರ್ಣ, ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಗೆ ಹಾಗೂ ಭವ್ಯ ರಾಮ ಮಂದಿರದ ಉದ್ಘಾಟನೆಗೆ ವಿಶ್ವದೆಲ್ಲೆಡೆ ದಿನಗಣನೆ ಆರಂಭ ಗೊಂಡಿದ್ದು, ರಾಮ ಮಂದಿರದ ನಿರ್ಮಾಣದ ಮೂಲಕ ಕೋಟ್ಯಾಂತರ ಭಾರತೀಯರ ಕನಸು ಸಾಕಾರವಾಗುತ್ತಿದೆ ಎಂದಿದ್ದಾರೆ.

ಅಯೋಧ್ಯೆಯು ಮುಂದಿನ ದಿನಗಳಲ್ಲಿ ಕೋಟ್ಯಾಂತರ ಭಕ್ತಾಧಿಗಳ ಪಾಲಿಗೆ ಪುಣ್ಯಕ್ಷೇತ್ರವಾಗಿ ರೂಪುಗೊಳ್ಳಲಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆಯಲು ದೇಶದ ಹಲವು ಕಡೆಗಳಿಂದ ಭಕ್ತರು ಆಗಮಿಸಲಿದ್ದು, ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಬಹುದೊಡ್ಡ ಸಂಖ್ಯೆಯ ಶ್ರೀರಾಮನ ಆರಾಧಕರಿದ್ದು, ಅಯೋಧ್ಯೆಗೆ ನಿಯಮಿತವಾಗಿ ತೆರಳಲಿದ್ದಾರೆ.

ದೇಶದ ವಿವಿಧ ಪುಣ್ಯಕ್ಷೇತ್ರಗಳಲ್ಲಿ ಈಗಾಗಲೇ ಕರ್ನಾಟಕ ಭವನದ ನಿರ್ಮಾಣದಿಂದ ಕರ್ನಾಟಕದ ಪ್ರವಾಸಿಗರಿಗೆ ಅನು ಕೂಲವಾಗಿದ್ದು, ಅಯೋಧ್ಯೆಯಲ್ಲೂ ರಾಮನ ದರ್ಶನ ಪಡೆಯಲು ತೆರಳುವ ಕನ್ನಡಿಗರ ವಿಶ್ರಾಂತಿಗೆ ಹಾಗೂ ವಾಸ್ತವ್ಯಕ್ಕೆ ಅನುಕೂಲವಾಗುವಂತೆ ಅಯೋಧ್ಯೆಯಲ್ಲಿ ಒಂದು ಕರ್ನಾಟಕ ಭವನ ನಿರ್ಮಾಣದ ಅಗತ್ಯವಿದೆ ಎಂದವರು ಪತ್ರದಲ್ಲಿ ವಿವರಿಸಿದ್ದಾರೆ.

ಕರ್ನಾಟಕದಿಂದ ಅಯೋಧ್ಯೆಗೆ ತೆರಳಲಿರುವ ಕನ್ನಡಿಗರ ವಾಸ್ತವ್ಯಕ್ಕೆ ಸಹಾಯವಾಗುವಂತೆ ಕರ್ನಾಟಕ ಭವನವನ್ನು ಅಯೋಧ್ಯೆಯಲ್ಲಿ ಶೀಘ್ರವಾಗಿ ನಿರ್ಮಾಣ ಮಾಡಿ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲ ಮಾಡಿ ಕೊಡುವಂತೆ ಶಾಸಕ ಯಶ್‌ಪಾಲ್ ಸುವರ್ಣ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News