ಜಲಜೀವನ್ ಮಿಷನ್ ಕಾಮಗಾರಿ ಅವೈಜ್ಞಾನಿಕ ಆರೋಪ: ವಾರದೊಳಗೆ ಪರಿಶೀಲನಾ ವರದಿಗೆ ದಿನೇಶ್ ಗುಂಡೂರಾವ್ ಸೂಚನೆ
ಮಂಗಳೂರು: ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್‌ನಡಿ ಮೂರು ಹಂತಗಳಲ್ಲಿ ನಡೆದಿರುವ ಕಾಮಗಾರಿಗಳ ವಿವರ, ಎಷ್ಟು ಕಡೆ ನೀರು ಪೂರೈಕೆ ಆರಂಭಿಸಲಾಗಿದೆ ಸೇರಿದಂತೆ ಸಂಪೂರ್ಣ ಯೋಜನೆಯ ಸಂಪೂರ್ಣ ವರದಿಯನ್ನು ವಾರದೊಳಗೆ ನೀಡುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸಂಬಂಧಪಟ್ಟ ಯೋಜನಾಧಿಕಾರಿಗೆ ಸೂಚನೆ ನೀಡಿದರು.
ದ.ಕ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ತೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ಜಲಜೀವನ್ ಮಿಷನ್ ಕಾಮಗಾರಿಗಳ ವಿಳಂಬ, ಕಳಪೆ ಹಾಗೂ ಅವೈಜ್ಞಾನಿಕವಾಗಿ ನಡೆದಿದೆ ಎಂಬ ಸಭೆಯಲ್ಲಿ ವ್ಯಕ್ತವಾದ ಆರೋಪಕ್ಕೆ ಈ ಪ್ರತಿಕ್ರಿಯೆ ನೀಡಿದರು.
ಜಲಜೀವನ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲನೆಯ ಸಂದರ್ಭ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಮಾತನಾಡಿ, ಯೋಜನೆಯು ಮೂರು ಹಂತಗಳಲ್ಲಿ ನಡೆಯುತ್ತಿದ್ದು, ಪ್ರಥಮ ಹಂತದ 458 ಕಾಮಗಾರಿಗಳು 125.68 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿವೆ. 2ನೆ ಹಂತದ 134ರಲ್ಲಿ 32 ಪೂರ್ಣಗೊಂಡಿದ್ದು, 102 ಪ್ರಗತಿಯಲ್ಲಿವೆ. 3ನೆ ಹಂತದಲ್ಲಿ 108 ಕಾಮಗಾರಿಗಳಲ್ಲಿ 11 ಕಾಮಗಾರಿ ಪೂರ್ಣಗೊಂಡು, 97 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ವಿವರ ನೀಡಿದರು.
ಕೆಡಿಪಿ ನಾಮ ನಿರ್ದೇಶಿತ ಸದಸ್ಯ ಮೆಲ್ವಿನ್ ಡಿಸೋಜಾ ಪ್ರತಿಕ್ರಿಯಿಸಿ, ಅಡ್ಯಾರ್ ಮತ್ತು ನೀರುಮಾರ್ಗದಲ್ಲಿ ಈ ಯೋಜನೆ ಯಡಿ ಮಾಡಲಾಗಿರುವ ಓವರ್‌ಹೆಡ್ ಟ್ಯಾಂಕ್ ಅಂದಾಜುಪಟ್ಟಿಯಂತೆ ಮಾಡಲಾಗಿಲ್ಲ. ಪೈಪ್‌ಲೈನ್ ಇರುವಲ್ಲಿಯೇ ಮತ್ತೆ ಜೋಡಣೆ ಮಾಡಲಾಗಿದ್ದು, ಇಲ್ಲದಿರುವಲ್ಲಿ ಸಂಪರ್ಕ ವ್ಯವಸ್ಥೆ ಮಾಡಿಲ್ಲ. ನೀರಿನ ಮೂಲವನ್ನೇ ಗುರುತಿಸಲಾಗಿಲ್ಲ ಎಂದು ದೂರಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ ಯೋಜನೆಯಡಿ ನಿಗದಿತ ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಲಾ ಗಿದೆಯೇ ಎಂದು ಪ್ರಶ್ನಿಸಿದರು.
ಪ್ರಥಮ ಹಂತದಲ್ಲಿ ಪೂರ್ಣಗೊಂಡಿರುವ 458 ಕಾಮಗಾರಿಗಳಿಂದ ನೀರು ಪೂರೈಕೆ ಆರಂಭವಾಗಿದೆಯೇ ಎಂಬ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆಗೆ ಸಂಬಂಧಪಟ್ಟ ಅಧಿಕಾರಿ ನಿರುತ್ತರರಾಗಿದ್ದರು. ಉದ್ದೇಶ ಈಡೇರದಿದ್ದರೆ ಈ ರೀತಿ ಕೋಟಿಗಟ್ಟಲೆ ವ್ಯಯಿಸಿ ಮಾಡಲಾಗುವ ಕಾಮಗಾರಿಯಿಂದ ಲಾಭವೇನು ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಎಲ್ಲೆಲ್ಲಾ ಕಾಮಗಾರಿಗಳು ಅಸಮರ್ಪವಾಗಿವೆಯೇ ಅದನ್ನು ಸರಿಪಡಿಸಬೇಕು. ಶೀಘ್ರದಲ್ಲೇ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಕಳಪೆ, ಅವೈಜ್ಞಾನಿಕ ಕಾಮಗಾರಿ ಕಂಡುಬಂದರೆ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಿಂಡಿ ಅಣೆಕಟ್ಟುಗಳ ಸಾಮರ್ಥ್ಯ ಅಧ್ಯಯನಕ್ಕೆ ಆಗ್ರಹ
ಕಿರು ನೀರಾವರಿ ಯೋಜನೆಯಡಿ ದ.ಕ.ಜಿ.ಪಂ. ವ್ಯಾಪ್ತಿಯಲ್ಲಿ ನಿರ್ಮಾಣವಾದ ಕಿಂಡಿ ಅಣೆಕಟ್ಟುಗಳಲ್ಲಿ ನೀರು ಸಂಗ್ರಹಕ್ಕೆ ಪೂರಕವಾಗಿ ಹಲಗೆ ಹಾಕುವ ಕಾರ್ಯ ನಡೆದಿಲ್ಲ. ಊರಿನವರೇ ಈ ಕಾರ್ಯ ಮಾಡುವ ಪರಿಸ್ಥಿತಿ ಇದೆ ಎಂದು ವಿಧಾನ ಪರಿಷತ್ ಸದಸ್ಯರಾದ ಡಾ. ಮಂಜುನಾಥ ಭಂಡಾರಿ, ಶಾಸಕ ಹರೀಶ್ ಪೂಂಜ ಸಭೆಯ ಗಮನ ಸೆಳೆದರು.
ಜಿಲ್ಲೆಯಲ್ಲಿ 447 ಕಿಂಡಿ ಅಣೆಕಟ್ಟುಗಳ ನಿರ್ಮಾಣವಾಗಿದ್ದು, ಅದರಲ್ಲಿ 297 ಕಿಂಡಿ ಅಣೆಕಟ್ಟುಗಳ ನಿರ್ವಹಣೆಗೆ 3 ಕೋಟಿ ರೂ. ವೆಚ್ಚದ ಅಂದಾಜುಪಟ್ಟಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿ ಉತ್ತರಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರತಿಕ್ರಿಯಿಸಿ, ಅಂತರ್ಜಲ ಸಂರಕ್ಷಣೆ ಹಾಗೂ ಗ್ರಾಮೀಣ ಪ್ರದೇಶ ದಲ್ಲಿ ನೀರಿನ ಸಮಸ್ಯೆ ನಿವಾರಿಸುವ ಸಲುವಾಗಿ ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಹಾಗಾಗಿ ಇದರ ಸಾಮರ್ಥ್ಯದ ಕುರಿತಂತೆ ಅಧ್ಯಯನ ಆಗಬೇಕು ಎಂದರು.
ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿಗೆ ಸೂಚನೆ
ಪ್ಲಾಸ್ಟಿಕ್ ಬಳಕೆ ನಿಷೇಧವಿದ್ದರೂ ಕಲ್ಯಾಣ ಮಂಟಪ ಸೇರಿದಂತೆ ಸರಕಾರಿ ಕಚೇರಿಗಳಲ್ಲಿಯೂ ಪ್ಲಾಸ್ಟಿಕ್ ಬಾಟಲ್ ಹಾಗೂ ಲೋಟಗಳ ಬಳಕೆ ಚಾಲ್ತಿಯಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಪ್ರತಿಕ್ರಿಯಿಸಿ, ಮಂಗಳೂರು ಹಾಗೂ ಧರ್ಮಸ್ಥಳವನ್ನು ಪೈಲಟ್ ಯೋಜನೆ ಯಡಿ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸುವ ನಿಟ್ಟಿನಲ್ಲಿ ಸುತ್ತೋಲೆ ಬಂದಿದ್ದು, ಕ್ರಮವಾಗುತ್ತಿದೆ ಎಂದರು.
ನಿಷೇಧಿತ ಪ್ಲಾಸ್ಟಿಕ್ ಬಳಕೆಯ ಕುರಿತಂತೆ ಜಾಗೃತಿಯನ್ನು ಅಭಿಯಾನದ ರೀತಿಯಲ್ಲಿ ಕೈಗೊಳ್ಳುವ ಕೆಲಸವಾಗಬೇಕು ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.
ಸಂಪ್ರದಾಯಬದ್ಧ ಕೋಳಿ ಅಂಕಕ್ಕೆ ಅವಕಾಶ
ದ.ಕ. ಜಿಲ್ಲೆಯ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಹಲವು ರೀತಿಯ ಸಂಪ್ರದಾಯಗಳು ತಲೆತಲಾಂತರದಿಂದ ಚಾಲ್ತಿ ಯಲ್ಲಿದೆ. ಕಂಬಳದಂತೆ ಕೋಳಿ ಅಂಕ ಕೂಡ ಉತ್ಸವಗಳ ಸಂದರ್ಭ ನಡೆಯುತ್ತಿದ್ದು, ಇದಕ್ಕೆ ಅನುಮತಿಗಾಗಿ ನಾಲ್ಕು ಹಂತಗಳಲ್ಲಿ ಆಯೋಜಕರು ಠಾಣೆಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ. ಈ ಬಗ್ಗೆ ಸಮೀಕ್ಷೆ ಮಾಡಿ ಇಂತಹ ಸಂಪ್ರದಾಯ ಬದ್ಧ ಕೋಳಿ ಅಂಕಕ್ಕೆ ಅಡಚಣೆ ಆಗದಂತೆ ಕ್ರಮ ವಹಿಸಬೇಕು ಎಂದು ಶಾಸಕ ಹರೀಶ್ ಪೂಂಜ ಸಭೆಯಲ್ಲಿ ಆಗ್ರಹಿಸಿದರು.
ಈ ಸಂದರ್ಭ ಎಸ್ಪಿ ಸಿ.ಬಿ. ರಿಷ್ಯಂತ್ ಅವರು ಪ್ರತಿಕ್ರಿಯಿಸಿ, ಯಾವುದೇ ರೀತಿಯ ಕೋಳಿ ಅಂಕಗಳಿಗೆ ಅನುಮತಿ ನೀಡುವ ಯಾವುದೇ ಅಧಿಕಾರ ಪೊಲೀಸ್ ಇಲಾಖೆಗೆ ಇರುವುದಿಲ್ಲ. ಆ ರೀತಿ ಅನುಮತಿಗಾಗಿ ಅಲೆದಾಡಿರುವ ದಾಖಲೆಗಳಿದ್ದರೆ ಒದಗಿಸಿ, ನನ್ನ ಗಮನಕ್ಕೆ ತನ್ನಿ ಎಂದು ಹೇಳಿದರು.
ಪುತ್ತೂರು ಶಾಸಕ ಅಶೋಕ್ ರೈ ಮಾತನಾಡಿ, ಸಂಪ್ರದಾಯ ಬದ್ಧ ಕೋಳಿ ಅಂಕಕ್ಕೆ ಯಾರ ವಿರೋಧವೂ ಇರುವುದಿಲ್ಲ. ಆದರೆ ಒಂದೆರಡು ದಿನ ನಡೆಸುವ ಈ ಕೋಳಿ ಅಂಕ ನಾಲ್ಕೈದು ದಿನಗಳಿಗೆ ಮುಂದುವರಿದರೆ ಅದು ಜೂಜಿಗೆ ಕಾರಣ ವಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂದರು.
ಪ್ರತಾಪ್ ಸಿಂಹ ಅವರೂ ಪ್ರತಿಕ್ರಿಯಿಸಿ, ಒಂದೆರಡು ದಿನ ಸಂಪ್ರದಾಯಬದ್ಧವಾಗಿ ನಡೆದರೆ ಯಾವುದೇ ತೊಂದರೆ ಆಗಬಾ ರದು. ಆದರೆ ಅದಕ್ಕಿಂತ ಹೆಚ್ಚು ದಿನಕ್ಕೆ ಅವಕಾಶ ದೊರೆತರೆ ಅದು ಜೂಜಿಗೆ ಕಾರಣವಾಗುತ್ತದೆ. ಇದಕ್ಕೆ ಅವಕಾಶ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಸಭೆಯ ಆರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಅವರು ಸಭೆಯ ನಡವಳಿಯನ್ನು ಚುನಾಯಿತ ಪ್ರತಿನಿಧಿ ಗಳಿಗೆ ನೀಡಲಾಗುತ್ತಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೈದ ಪ್ರಸಂಗ ನಡೆಯಿತು. ಸಭೆಯ ಅನುಪಾಲನಾ ವರದಿ ಸಭೆಯಲ್ಲಿ ಒದಗಿಸಲಾಗುತ್ತದೆ. ಸಭೆಯ ಬಳಿಕ ಪಾಲನಾ ವರದಿಯನ್ನು ವಾರದೊಳಗೆ ಸಚಿವರ ಸಹಿಯ ಬಳಿಕ ಮೇಲ್ ಮೂಲಕ ಸದಸ್ಯರಿಗೆ ತಲುಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಈ ಮಾತಿನಿಂದ ಸಮಾಧಾನ ಗೊಳ್ಳದ ಬೋಜೇಗೌಡ ಅಧಿಕಾರಿಗಳ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮುಂದಿನ ಸಭೆಯಿಂದ ಇಂತಹ ಯಾವುದೇ ಗೊಂದಲ ಆಗದಂತೆ ಕ್ರಮ ವಹಿಸುವಂತೆ ಉಸ್ತುವಾರಿ ಸಚಿವರು ಸೂಚನೆ ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ಹಮೀದ್ ಕಿನ್ಯ, ಸುಜಯ ಕೃಷ್ಣ, ರಾಜಶೇಖರ ಜೈನ್ ಉಪಸ್ಥಿತರಿದ್ದರು.
ಶಾಸಕರಾದ ಕಾಮತ್- ರೈ ವಾಗ್ವಾದ!
ಹಿಂದೆ ವೆನ್‌ಲಾಕ್ ಆಸ್ಪತ್ರೆಯಲ್ಲಿ ಡಯಾಬಿಟಿಸ್ ರೋಗಿಗಳಿಗಾಗಿ ಇನ್ಸುಲಿನ್ ನೀಡುವ ವ್ಯವಸ್ಥೆ ಇದ್ದು, ಕಳೆದೊಂದು ವರ್ಷದಿಂದ ಅದನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಿ.ಪಂ. ನಾಮನಿರ್ದೇಶಿತ ಸದಸ್ಯ ಸಂತೋಷ್ ಕುಮಾರ್ ಪ್ರಸ್ತಾಪಿಸಿದರು.
ಔಷಧಿಗಳ ಹೊಸ ಬೇಡಿಕೆ ಪಟ್ಟಿಯಲ್ಲಿ ಇದನ್ನು ಸೇರಿಸಲು ಕ್ರಮ ವಹಿಸುವುದಾಗಿ ಆರೋಗ್ಯ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್ ತಿಳಿಸಿದರು. ಐಟಿಡಿಪಿ ಇಲಾಖೆಯ ಮೂಲಕ ಆದಿವಾಸಿ ಕುಟುಂಬಗಳ ಆರೋಗ್ಯ ತಪಾಸಣೆಗಾಗಿನ ಮೊಬೈಲ್ ಆರೋಗ್ಯ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರಿಗೆ ಹೊಸ ಟೆಂಡರ್ ಕರೆಯಲಾಗಿದ್ದು, ವ್ಯವಸ್ಥೆ ಯಾಗಲಿದೆ ಎಂದು ಸಚಿವರು ಹೇಳಿದರು.
ಹೊಸ ಸರಕಾರ ಬಂದ ಮೇಲೆ ಜಿಲ್ಲೆಯಲ್ಲಿ ಡಯಾಲಿಸಿಸ್ ಯಂತ್ರಗಳ ವ್ಯವಸ್ಥೆ ಉತ್ತಮವಾಗಿದೆ ಎಂದು ಅಶೋಕ್ ರೈ ಹೇಳಿದಾಗ ಕೆರಳಿದ ಶಾಸಕ ವೇದವ್ಯಾಸ ಕಾಮತ್, ಕಳೆದ ಎಂಟು ತಿಂಗಳಿನಿಂದ ರಾಜ್ಯದಲ್ಲೆಡೆ ಡಯಾಲಿಸಿಸ್ ಯಂತ್ರಗಳ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. 75 ವರ್ಷಗಳಲ್ಲಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ಸಮರ್ಪಕ ಬೆಡ್ ವ್ಯವಸ್ಥೆಯೇ ಇರಲಿಲ್ಲ. ಕಳೆದ ನಮ್ಮ ಅವಧಿಯಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಶಾಸಕದ್ವರ ನಡುವೆ ಮಾತಿನ ಚಕಮಕಿ ತಾರಕಕ್ಕೇರುತ್ತಿದ್ದಂತೆಯೇ ಸಚಿವ ದಿನೇಶ್ ಗುಂಡೂರಾವ್ ಮಧ್ಯ ಪ್ರವೇಶಿಸಿ, ಕೊರೋನ ಅವಧಿಯಲ್ಲಿ ಎಲ್ಲಾ ಕಡೆ ಆರೋಗ್ಯ ಇಲಾಖೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಡಯಾಲಿಸಿಸ್ ಯಂತ್ರಗಳಲ್ಲಿ ಹಿಂದಿನ ವ್ಯವಸ್ಥೆಯಲ್ಲಿ ಹಲವು ಕಾರಣಗಳಿಂದ ತೊಂದರೆ ಆಗಿದ್ದನ್ನು ಸರಿಪಡಿಸಿ ಹೊಸ ವ್ಯವಸ್ಥೆ ಮಾಡಲಾಗಿದೆ. ಇನ್ನು ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.