ಒತ್ತಡಕ್ಕೆ ಮಣಿದು ಮನೆ ಕೆಡವಿದ ಕಂದಾಯ ಇಲಾಖೆ: ಆರೋಪ; ಪರಿಹಾರಕ್ಕೆ ಒತ್ತಾಯ
ಮಂಗಳೂರು, ಜ.13: ಪುತ್ತೂರು ನಗರದ ಬನ್ನೂರು ಬಲಮುರು ಗಣಪತಿ ದೇವಸ್ಥಾನದ ಬಳಿ ಕಳೆದ ಸುಮಾರು 27 ವರ್ಷಗಳಿಂದ ವಾಸವಿದ್ದ ಚಂದ್ರಶೇಖರ್ ಆಚಾರ್ ಎಂಬವರ ಮನೆಯನ್ನು ಪ್ರಭಾವಿ ವ್ಯಕ್ತಿಯ ಒತ್ತಡಕ್ಕೆ ಮಣಿದು ಕಂದಾಯ ಇಲಾಖೆಯ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಯಾವುದೇ ಮುನ್ಸೂಚನೆ ನೀಡದೆ ಕೆಡವಿರುವುದಾಗಿ ಆರೋಪಿಸಲಾಗಿದೆ.
ಪ್ರಕರಣ ಹೈಕೋರ್ಟ್ನಲ್ಲಿ ಇರುವಾಗಲೇ ಜನವರಿ 12ರಂದು ಮನೆಯನ್ನು ಅಕ್ರಮವಾಗಿ ಮನೆ ಕೆಡವಲಾಗಿದೆ ಎಂದು ಚಂದ್ರಶೇಖರ್ ಆಚಾರ್ ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದ್ದಾರೆ.
ಮನೆಯನ್ನು ಒತ್ತುವರಿ ಕಾರಣ ನೀಡಿ ಕೆಡವಿರುವ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ನೀಡುವಂತೆ ಅವರು ಆಗ್ರಹಿಸಿದ್ದಾರೆ.
ಸ್ಥಳೀಯರಾದ ಪ್ರಭಾಕರ ಎಂಬವರಿಂದ 10 ಸೆಂಟ್ಸ್ ಜಾಗವನ್ನು ಕ್ರಯ ಚೀಟು ಮಾಡಿ ಖರೀದಿಸಿದ್ದು, ಬಳಿಕ ಆ ಜಾಗದಲ್ಲಿ ಮನೆ ನಿರ್ಮಿಸಿದ್ದೆ. ಆ ಜಾಗದಲ್ಲಿ ಇದೀಗ 8 ಸೆಂಟ್ಸ್ ಮಾತ್ರ ಇದೆ. ವಿವೇಕಾನಂದ ಕಾಲೇಜು ರಸ್ತೆಗೆ ನಮ್ಮ ಜಾಗದಿಂದ ಎರಡು ಸೆನ್ಸ್ ಹೋಗಿರುತ್ತದೆ. ಬಳಿಕ ನಮ್ಮ ಸ್ಥಳಕ್ಕೆ ಒತ್ತುವರಿಯಾಗಿದ್ದ 9 ಸೆಂಟ್ಸ್ ಜಾಗವನ್ನು ಕಂದಾಯ ಇಲಾಖೆ ನಮಗೆ ನೀಡಿದ್ದು, ಆ ಜಾಗದಲ್ಲಿ 1996ರಲ್ಲಿ ಒಂದು ಚಿಕ್ಕ ಮನೆಯನ್ನು ಕಟ್ಟಿ ವಾಸ ಆರಂಭಿಸಿದ್ದೆವು. ಆ ಜಾಗಕ್ಕೆ ತೆರಿಗೆ ಕೂಡ ಕಟ್ಟುತ್ತಿದ್ದೇವೆ. ಆದರೆ ಸ್ಥಳೀಯ ಪ್ರಭಾವಿ ವ್ಯಕ್ತಿಯೋರ್ವರು ಜಾಗದ ಬಗ್ಗೆ ತಕರಾರು ಎತ್ತಿದ್ದು ಅಸಮರ್ಪಕ ದಾಖಲೆಗಳನ್ನು ಕೋರ್ಟ್ ಗೆ ಸಲ್ಲಿಸಿದ್ದಾರೆ ಎಂದು ಅವರು ದೂರಿದ್ದಾರೆ.