ಇಂಧನ ಸಚಿವ ಕೆ.ಜೆ.ಜಾರ್ಜ್ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ
ಮಂಗಳೂರು: 70 ವರ್ಷದಲ್ಲಿ ಭಾರತವನ್ನು ಸಮೃದ್ಧ ‘ಭಾರತ’ವನ್ನಾಗಿ ಮಾಡಿರುವುದು ಕಾಂಗ್ರೆಸ್. ಪಂಡಿತ್ ಜವಾಹರ ಲಾಲ್ ನೆಹರು ಅವರು ಭಾರತವನ್ನು ಕಟ್ಟಿದರು. ಇಂದಿರಾ ಗಾಂಧಿ ಅವರು ಭಾರತವನ್ನು ಉಳಿಸಿ ಬೆಳೆಸಿದರು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಮರಿಸಿದ್ದಾರೆ.
ಸೋಮವಾರ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ನೇತೃತ್ವವನ್ನು ವಹಿಸಿಕೊಂಡು ಭಾರತಕ್ಕೆ ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ತಂದು ದೇಶದ ಜನರನ್ನು ದಾಸ್ಯದ ಸಂಕೋಲೆಯಿಂದ ಮುಕ್ತಗೊಳಿಸಿದರು. ನೆಹರೂ ಅವರು ಹಲವು ಬಾರಿ ಸೆರೆವಾಸ ಅನುಭವಿಸಿ ತಮ್ಮ ಸರ್ವ ಸಂಪತ್ತನ್ನು ದೇಶಕ್ಕೆ ವಿನಿಯೋಗಿಸಿ ಹೋರಾಟದಲ್ಲಿ ತೊಡಗಿಸಿದರು. ಸ್ವಾತಂತ್ರ್ಯೋತ್ತರದಲ್ಲಿ ಅವರ ಸಾಧನೆ ಅಗಾಧ. ಪಂಚವಾರ್ಷಿಕ ಯೋಜನೆಯನ್ನು ಜಾರಿಗೆ ತಂದು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದರು. ಬಳಿಕ ಇಂದಿರಾ ಗಾಂಧಿ ಅವರು 20 ಅಂಶ ಕಾರ್ಯಕ್ರಮವನ್ನು ತಂದು ಬಡವರನ್ನು ಆರ್ಥಿಕವಾಗಿ ಸಬಲೀಕರಣ ಗೊಳಿಸಿದರು. ರಾಜೀವ್ ಗಾಂಧಿ ಅವರು ವಿಜ್ಞಾನ-ತಂತ್ರಜ್ಞಾನಕ್ಕೆ ಒತ್ತು ನೀಡಿ ಇಂದಿನ ಭಾರತದ ಬೆಳವಣಿಗೆಗೆ ಕಾರಣೀ ಭೂತರಾಗಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಎಲ್ಲ ಧರ್ಮಗಳಿಗೆ ಗೌರವ ನೀಡುತ್ತಾ ಬಂದಿರುವ ಪಕ್ಷ. ಬಿಜೆಪಿಗೆ ನೇರವಾಗಿ ಅಧಿಕಾರಕ್ಕೇರಲು ಸಾಧ್ಯವಾಗಿಲ್ಲ. ಧರ್ಮರಾಜಕಾರಣದಿಂದ ಅಧಿಕಾರವನ್ನು ಹಿಡಿದಿದೆ ಎಂದರು.
ಕಾಂಗ್ರೆಸ್ ಮಹಾತ್ಮ ಗಾಂಧಿಯ ರಾಮರಾಜ್ಯದ ಕನಸನ್ನು ನನಸಾಗಿಸಲು ಪ್ರಯತ್ನ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದೆ ಎಂದು ಹೇಳಿದರು.
ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕ ಜೆ.ಆರ್.ಲೋಬೊ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಸುರೇಶ್ ಬಳ್ಳಾಲ್, ಮಮತಾ ಗಟ್ಟಿ, ಎಂ.ಎ. ಗಫೂರ್, ಶಾಲೆಟ್ ಪಿಂಟೋ, ಎಸ್.ಅಪ್ಪಿ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಶುಭೋದಯ ಆಳ್ವ ಸ್ವಾಗತಿಸಿದರು, ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಜೋಕಿಂ ಡಿಸೋಜ ವಂದಿಸಿದರು.