×
Ad

ದಕ್ಷಿಣ ಕನ್ನಡ ಜಿಲ್ಲೆಯ ಆನೆ ಹಾವಳಿ ತಡೆಗೆ ಕ್ರಮ: ಈಶ್ವರ ಖಂಡ್ರೆ ಭರವಸೆ

Update: 2024-02-05 19:44 IST

ಮಂಗಳೂರು, ಫೆ.5: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆನೆ ಮತ್ತು ಕಾಡೆಮ್ಮೆಗಳ ಹಾವಳಿಯಿಂದ ಆಗುತ್ತಿರುವ ಬೆಳೆ ಹಾನಿ ಮತ್ತು ಜೀವಹಾನಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಭರವಸೆ ನೀಡಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕೊಲ್ಲಮೊಗ್ರು ಮತ್ತು ಸುತ್ತಲಿನ ನಾಲ್ಕು ಗ್ರಾಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘ ಮತ್ತು ಸುಬ್ರಹ್ಮಣ್ಯ ಪ್ರೆಸ್ ಕ್ಲಬ್, ಸುಳ್ಯ ತಾಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 5ನೇ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಭಾಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು, ಪಶ್ಚಿಘಟ್ಟದ ವ್ಯಾಪ್ತಿಯಲ್ಲಿರುವ ಈ ಭಾಗದಲ್ಲಿ ಸಾಕಷ್ಟು ಸಮಸ್ಯೆ ಇದ್ದು ಕಾನೂನಾತ್ಮಕವಾಗಿ ಮತ್ತು ಕಾಯಿದೆಯ ಮಿತಿಯಲ್ಲಿ ಪರಿಹರಿಸಲು ಪ್ರಯತ್ನಿಸುವುದಾಗಿ ಹೇಳಿದರು.

ಆನೆ ಹಾವಳಿ ತಡೆಗೆ ಕಂದಕ ನಿರ್ಮಾಣ, ಸೌರ ಬೇಲಿ ಅಳವಡಿಕೆ ಮತ್ತು ರೈಲ್ವೆ ಬ್ಯಾರಿಕೇಡ್ ಹಾಕುವ ಕಾರ್ಯ ಆಗುತ್ತಿದೆ. ಆದರೆ ರಾಜ್ಯ ಆನೆಗಳ ಸಂಖ್ಯೆಯಲ್ಲಿ ನಂ.1 ಆಗಿದ್ದು, 6395 ಆನೆಗಳಿವೆ ಆದರೆ ಅರಣ್ಯ ಪ್ರದೇಶ ಕ್ಷೀಣಿಸುತ್ತಿದೆ ಹೀಗಾಗಿ ಸಮಸ್ಯೆ ಉಲ್ಬಣವಾಗುತ್ತಿದೆ. ನಮ್ಮ ಇತಿಮಿತಿಯಲ್ಲಿ ಸಮಸ್ಯೆ ಪರಿಹರಿಸಲು ಶ್ರಮಿಸಲಾಗುವುದು. ಕಾಡಿನಿಂದ ನಾಡಿಗೆ ಆನೆ ಬಾರದಂತೆ ಕಾಡಿನಲ್ಲಿನ ಜಲ ಮೂಲಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ನಾಳೆ ತಮ್ಮ ಅಧ್ಯಕ್ಷತೆಯಲ್ಲಿ ಮಂಗಳೂರಿನಲ್ಲಿ ನಡೆಲಿರುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಇದ್ದ ಈ ಭಾಗದ ರಸ್ತೆಯ ಅಭಿವೃದ್ಧಿ ಕುರಿತಂತೆ ಚರ್ಚಿಸಿ ಪರಿಹಾರ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಅರಣ್ಯ ಸಂರಕ್ಷಣಾ ಕಾಯಿದೆ 1978 ಜಾರಿಗೆ ಬರುವ ಮೊದಲು ಸಾಗುವಳಿ ಮಾಡುತ್ತಿದ್ದ 3 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಸಣ್ಣ ರೈತರಿಗೆ ಮತ್ತು ಸಣ್ಣ ಮನೆಗಳನ್ನು ಕಟ್ಟಿಕೊಂಡಿರುವವರನ್ನು ಒಕ್ಕಲೆಬ್ಬಿಸದಂತೆ ಸೂಚನೆ ನೀಡಲಾಗಿದೆ ಎಂದರು.

ಸ್ಥಳೀಯರು ಮಾತನಾಡಿ, ಸುಬ್ರಹ್ಮಣ್ಯದಲ್ಲಿರುವ ಅರಣ್ಯ ಅತಿಥಿಗೃಹವನ್ನು ಅಭಿವೃದ್ಧಿ ಪಡಿಸುವಂತೆ ಮತ್ತು ಚಾರಣ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದರೆ, ಸ್ಥಳೀಯರ ಆರ್ಥಿಕ ಸ್ಥಿತಿ ಸುಧಾರಣೆ ಆಗುತ್ತದೆ ಎಂದು ಹೇಳಿದರು.

ಇದಕ್ಕೆ ಸ್ಪಂದಿಸಿದ ಸಚಿವರು ತಾವು ಇಂದು ಕುಮಾರ ಪರ್ವತ ಚಾರಣ ಪಥಕ್ಕೂ ಭೇಟಿ ನೀಡಿ ಪರಿಶೀಲಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಒಂದೇ ಬಾರಿಗೆ ಜನರು ಬಂದು ಅರಣ್ಯ, ಪರಿಸರ ಹಾಳಾಗದಂತೆ ಎಚ್ಚರ ವಹಿಸಲಾಗುವುದು. ಆನ್ ಲೈನ್ ಬುಕ್ಕಿಂಗ್ ಸೇರಿದಂತೆ ಸಮಗ್ರ ಯೋಜನೆ ರೂಪಿಸಿ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲಾಗುವುದು. ಸ್ಥಳೀಯರ ಆರ್ಥಿಕ ಪ್ರಗತಿಗೂ ಶ್ರಮಿಸಲಾಗುವುದು ಎಂದರು.

ಏಕ ಬಳಕೆ ಪ್ಲಾಸ್ಟಿಕ್ ಪ್ರಕೃತಿ ಪರಿಸರಕ್ಕೆ ಮಾರಕವಾಗಿದ್ದು, ಜನರು ತಮ್ಮ ಗ್ರಾಮ ಸ್ವಚ್ಛವಾಗಿಟ್ಟುಕೊಳ್ಳಲು, ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಸುಂದರ ಭೂಮಿಯನ್ನು ಮುಂದಿನ ಪೀಳಿಗೆಗೆ ನೀಡಲು ಏಕ ಬಳಕೆ ಪ್ಲಾಸ್ಟಿಕ್ ತ್ಯಜಿಸಬೇಕು ಎಂದು ತಿಳಿಸಿದರು.

ಸ್ಥಳೀಯರು ಸಲ್ಲಿಸಿರುವ ಎಲ್ಲ ಅಹವಾಲುಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಕಾನೂನಿನ ಇತಿಮಿತಿಯಲ್ಲಿ ಅದನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನ ನಾಡುವ ಭರವಸೆ ನೀಡಿದರು.

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿ ಮೆರೆಯಬೇಕು. ನಾವೆಲ್ಲರೂ ಸೋದರರಂತೆ ಬಾಳಬೇಕು. ನಮ್ಮ ನಮ್ಮಲ್ಲೇ ದ್ವೇಷ ಹುಟ್ಟುಹಾಕುವವರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಹೇಳಿದರು.

ಮಾಧ್ಯಮದವರು ಸುದ್ದಿ ತಲುಪಿಸುವ ಕೆಲಸ ಮಾಡುತ್ತಾರೆ. ಪತ್ರಿಕಾಂಗ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದ ನಂತರದ ಸ್ಥಾನ ಪಡೆದಿದೆ. ಇಲ್ಲಿನ ಪತ್ರಕರ್ತರ ಸಂಘಟನೆಗಳು ನಾಲ್ಕು ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿ, ಐದನೇ ಗ್ರಾಮ ವಾಸ್ತವ್ಯ ನಡೆಸುವ ಮೂಲಕ ಸ್ಥಳೀಯರ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದ್ದಾರ ಇದಕ್ಕಾಗಿ ಅಭಿನಂದಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರನ್ನು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅವರು ಅಡಿಕೆಯ ಗೊನೆ ನೀಡಿ ಅಭಿನಂದಿಸಿದರು.

ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲು ಸೂಚನೆ: ಇತ್ತೀಚೆಗೆ ಒಂದೇ ದಿನ ಸಾವಿರಾರು ಚಾರಣಿಗರು ಆಗಮಿಸಿ ಸುದ್ದಿಯಾ ಗಿದ್ದ, ಕುಮಾರಪರ್ವತ ಚಾರಣ ಪಥಕ್ಕಿಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು.

ಪ್ರಸಕ್ತ ಚಾರಣಕ್ಕೆ ತಾತ್ಕಾಲಿಕ ನಿರ್ಬಂಧ ಹೇರಿರುವ ಪ್ರವೇಶದ್ವಾರದಲ್ಲಿ ಚಾರಣ ಪಥದ ವಿವರ ಪಡೆದ ಸಚಿವರು, ಕೂಡಲೇ ಈ ಚಾರಣ ಪಥದಲ್ಲಿ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಮಾಡಿ, ಚಾರಣಿಗರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ಸೂಚನೆ ನೀಡಿದರು.

ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಅರಣ್ಯ ಸಿಬ್ಬಂದಿಯ ಕುಂದುಕೊರತೆ ಆಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News