ಪೂಜಾ ಸ್ಥಳಗಳ ಕಾಯ್ದೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ
ಮಂಗಳೂರು: ಜ್ಞಾನವಾಪಿ ಮಸೀದಿಯೊಳಗೆ ನುಸುಳಿರುವುದು ಮತ್ತು ಅದರ ಅತಿಕ್ರಮಣವನ್ನು ಖಂಡಿಸಿ ಹಾಗೂ ಪೂಜಾ ಸ್ಥಳಗಳ ಕಾಯ್ದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಶುಕ್ರವಾರ ನಗರದ ಮಿನಿ ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ ‘ದೇಶದಲ್ಲಿ ಹಾಡುಹಗಲೇ ಪ್ರಜಾತಂತ್ರದ ಕೊಲೆಯಾಗುತ್ತಿವೆ. ಕಾನೂನು ಎಂಬುದೇ ಇಲ್ಲ ಎಂಬಂತಾಗಿದೆ. ಮಸೀದಿಗಳನ್ನು ಜೆಸಿಬಿ ಬಳಸಿ ನಾಶ ಮಾಡುತ್ತಿದ್ದರೂ ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್, ಎಎಪಿ ಮೌನ ತಾಳುತ್ತಿರುವುದು ಖಂಡನೀಯ. ಇನ್ನು ನಾವು ಸುಮ್ಮನೆ ಕೂರುವಂತಿಲ್ಲ. ಹಕ್ಕಿಗಾಗಿ ಬೀದಿಗೆ ಇಳಿಯಬೇಕಿದೆ. ಲಾಠಿ ಏಟು ತಿನ್ನಲು, ಜೈಲು ಸೇರಲು, ಹುತಾತ್ಮ ರಾಗಲು ಸಿದ್ಧರಾಗಬೇಕಿದೆ. ನ್ಯಾಯಕ್ಕಾಗಿ ಸಂಘರ್ಷ ಮಾಡಲೇಬೇಕಾಗಿದೆ ಎಂದು ಹೇಳಿದರು.
ಎಸ್‌ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ವಿಮ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಮಾತನಾಡಿದರು.
ಪಕ್ಷದ ಮುಖಂಡರಾದ ಅಥಾವುಲ್ಲ ಜೋಕಟ್ಟೆ, ನವಾಝ್ ಉಳ್ಳಾಲ, ಮಿಸ್ರಿಯಾ ಕಣ್ಣೂರು, ನೌರಿನ್ ಆಲಂಪಾಡಿ ಮತ್ತಿತರರು ಪಾಲ್ಗೊಂಡಿದ್ದರು.