ಮುಕ್ಕ ಸಸಿಹಿತ್ಲುನಲ್ಲಿ ಉರೂಸ್: ಸಂತೆ ವ್ಯಾಪಾರಿಗಳಿಂದ ಬಲವಂತವಾಗಿ ಶುಲ್ಕ ಪಡೆಯುತ್ತಿರುವ ಉರೂಸ್ ಸಮಿತಿ; ಆರೋಪ
ಸಾಂದರ್ಭಿಕ ಚಿತ್ರ
ಮಂಗಳೂರು: ಹೊರವಲಯದ ಮುಕ್ಕ ಸಸಿಹಿತ್ಲುನಲ್ಲಿ ಇಂದು ಉರೂಸ್ ನಡೆಯಲಿದ್ದು, ಸಂತೆ ವ್ಯಾಪಾರಿಗಳಿಂದ ವ್ಯಾಪಾ ರದ ಮಾಡುವ ಸ್ಥಳಕ್ಕೆ ಬಲವಂತವಾಗಿ 1,500ರೂ.ಶುಲ್ಕ ಪಡೆಯಲಾಗುತ್ತಿದೆ ಎಂದು ಸಂತೆ ವ್ಯಾಪಾರಿಗಳು ದೂರಿದ್ದಾರೆ.
ಈ ಸಂಬಂಧ ʼವಾರ್ತಾಭಾರತಿʼಯೊಂದಿಗೆ ಮಾತನಾಡಿದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿಯ ಸಂಚಾಲಕ ಬಿ.ಕೆ. ಇಮ್ತಿಯಾಝ್, ಬಡ ಸಂತೆ ವ್ಯಾಪಾರಿಗಳು ತಮ್ಮ ಕುಟುಂಬ ನಿರ್ವಹಣೆಗಾಗಿ ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ವ್ಯಾಪಾರ ಮಾಡುತ್ತಾರೆ. ಅವರು ಮಾಡುವ ವ್ಯಾಪಾರದ ಹಣವನ್ನು ಸಂಘಟಕರಿಗೆ ನೀಡುವುದಾದರೆ ಅವರು ಪಡುವ ಕಷ್ಟ, ಮಾಡುವ ವ್ಯಾಪಾರಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮುಕ್ಕ ಉರೂಸ್ ನಲ್ಲಿ ವ್ಯಾಪಾರಿಗಳು ಮಸೀದಿ ಅಥವಾ ದರ್ಗಕ್ಕೆ ಸಂಬಂಧಿಸಿದ ಜಾಗದಲ್ಲಿ ಅಂಗಡಿಗಳನ್ನು ಹಾಕುತ್ತಿಲ್ಲ. ಕಡಲ ಕಿನಾರೆಯಲ್ಲಿ ಹಾಕುವ ಅಂಗಡಿಗಳಿಗೆ ಉರೂಸ್ ಸಮಿತಿ 1500 ರೂ. ವಸೂಲಿ ಮಾಡುತ್ತಿದ್ದಾರೆ ಎಂದು ವ್ಯಾಪಾರಿ ಗಳು ದೂರಿದ್ದಾರೆ. ಅದು ಅಕ್ಷಮ್ಯ. ಅಂಗಡಿ ಹಾಕಲು ಸ್ಥಳ ನೀಡಬೇಕೆಂದರೆ ಮೊದಲು ಹಣಕಟ್ಟಬೇಕೆಂದು ಉರೂಸ್ ಸಂಬಂಧಿತ ಸಮಿತಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಹೇಳಿದ್ದಾರೆ.
ವ್ಯಾಪಾರಿಗಳು ಸಮುದ್ರ ಕಿನಾರೆಯಲ್ಲಿ, ಸಾರ್ವಜನಿಕ ರಸ್ತೆಯಲ್ಲಿ ವ್ಯಾಪಾರ ನಡೆಸುವಾಗ ಆ ಜಾಗಕ್ಕೆ ಬಲವಂತದಿಂದ ಹಣ ಕಟ್ಟಿಸಿಕೊಳ್ಳುವುದು ಕಾನೂನು ಬಾಹಿರ. ಈ ಬಗ್ಗೆ ಜಿಲ್ಲಾಡಳಿತ ಶೀಘ್ರ ಕ್ರಮಕ್ಕೆ ಮುಂದಾಗುವ ಮೂಲಕ ಬಡ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಿ ಕೊಡಬೇಂದು ಇಮ್ತಿಯಾಝ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಜಿಲ್ಲಾಡಳಿತ ತಕ್ಷಣ ಕ್ರಮ ವಹಿಸಿ ಈಗಾಗಲೇ ಹಣ ಪಡೆದವರ ಹಣ ಹಿಂದಿರುಗಿಸಬೇಕು. ಸಾರ್ವಜನಿಕ ಪ್ರದೇಶದಲ್ಲಿ ಸಂತೆ ವ್ಯಾಪಾರಿಗಳಿಗೆ ಮುಕ್ತವಾಗಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಕ್ಕ ದರ್ಗದ ವಠಾರದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿಯಿಂದ ಪ್ರತಿಭಟನೆ ನಡೆಸಲಾ ಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
"ಕೆಲವೆಡೆ ಜಾತಿ-ಧರ್ಮದ ಹೆಸರಿನಲ್ಲಿ ವ್ಯಾಪಾರಕ್ಕೆ ನಿರ್ಬಂಧ ವಿಧಿಸಲಾಗುತ್ತಿದೆ. ಇನ್ನು ವ್ಯಾಪಾರಕ್ಕೆ ಅವಕಾಶ ನೀಡುವಲ್ಲಿ ಮನಸೋ ಇಚ್ಛೆ ಹಣ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ರಾಜ್ಯ ಸರಕಾರ ತುರ್ತು ಗಮನಹರಿಸಿ ಬಡ ಜಾತ್ರೆ ವ್ಯಾಪಾರಿ ಗಳ ಹಿತಕಾಯುವ ಕೆಲಸ ಮಾಡಬೇಕಿದೆ".
-ಬಿ.ಕೆ. ಇಮ್ತಿಯಾಝ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿಯ ಸಂಚಾಲಕ