ಕೋಮು ಸೌಹಾರ್ದಕ್ಕಾಗಿ ರಾಜ್ಯಾದ್ಯಂತ ಸಮಾವೇಶ: ನಿಸಾರ್ ಅಹ್ಮದ್
ಮಂಗಳೂರು: ಸಮಾಜದಲ್ಲಿ ಕೋಮು ಸೌಹಾರ್ದಕ್ಕಾಗಿ ಫೆಬ್ರವರಿಯಲ್ಲಿ ರಾಜ್ಯವ್ಯಾಪಿ ಸಮಾವೇಶ ಹಮ್ಮಿಕೊಳ್ಳಲಾಗು ವುದು ಎಂದು ಕರ್ನಾಟಕ ಅಲ್ಪಸಂಖ್ಯಾತ ಆಯೋಗ ಅಧ್ಯಕ್ಷ ನಿಸಾರ್ ಅಹ್ಮದ್ ತಿಳಿಸಿದ್ದಾರೆ.
ಮುಂದಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಸರಕಾರ ಕೈಗೊಳ್ಳಬಹುದಾದ ಸವಲತ್ತುಗಳ ಕುರಿತು ದ.ಕ. ಮತ್ತು ಉಡುಪಿ ಜಿಲ್ಲೆಯ ಅಲ್ಪಸಂಖ್ಯಾತ ಮುಖಂಡರೊಂದಿಗೆ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸಭೆ ನಡೆಸಿ ಅವರು ಮಾತನಾಡಿದರು.
ಸಮಾಜದಲ್ಲಿ ಕೋಮು ಸಾಮರಸ್ಯ ಅಗತ್ಯವಾಗಿದೆ. ಅದಕ್ಕಾಗಿ ಎಲ್ಲ ಸಮುದಾಯದ ಮುಖಂಡರನ್ನು ಕರೆಸಿ ಚಿಂತನೆ ನಡೆಸಲಾಗುತ್ತಿದೆ. ಮುಂದಿನ ಕ್ರಿಯಾಯೋಜನೆಯಲ್ಲಿ ಗ್ರಾಮಮಟ್ಟದಿಂದ ರಾಜ್ಯಮಟ್ಟದವರೆಗೆ ಪ್ರತ್ಯೇಕ ಕಾರ್ಯಕ್ರಮ ನಡೆಸುವ ಅಗತ್ಯತೆ ಇದೆ. ಎಲ್ಲಾ ಸಮುದಾಯದ ಜನರೂ ಮುಖ್ಯವಾಹಿನಿಯಲ್ಲಿ ಸೇರಬೇಕು ಎಂಬುದು ಆಯೋಗದ ಉದ್ದೇಶವಾಗಿದೆ ಎಂದರು.
ಕೇಂದ್ರ ಸರಕಾರದ ಯೋಜನೆಯಡಿ ಸೀ ಡಾಕ್ ಕಂಪನಿಯಿಂದ 200 ಮಂದಿ ಅಲ್ಪಸಂಖ್ಯಾತ ಇಂಜಿನಿಯರಿಂಗ್ ವಿದ್ಯಾರ್ಥಿ ಗಳಿಗೆ ಉದ್ಯೋಗಕ್ಕಾಗಿ ಒಂದು ತಿಂಗಳ ಉಚಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿಯ ಜೊತೆ ಮಾತುಕತೆ ನಡೆಸಲಾಗಿದೆ. ಇದರಿಂದ ಅಲ್ಪಸಂಖ್ಯಾತ ವಿದ್ಯಾರ್ಥಿ ಗಳಿಗೆ ಉದ್ಯೋಗ ಸೇರ್ಪಡೆಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ನಿಸಾರ್ ಅಹ್ಮದ್ ಹೇಳಿದರು.
ಮಾಜಿ ಪೊಲೀಸ್ ಅಧಿಕಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ ಮಾತನಾಡಿ ವಿದೇಶದಿಂದ ಆಗಮಿಸುವವ ಅಲ್ಪಸಂಖ್ಯಾತರಿಗೆ ಸ್ವಉದ್ಯೋಗಕ್ಕೆ ಸರಕಾರ ನೆರವಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಲು ಶುಲ್ಕ ವಿನಾಯ್ತಿ ನೀಡಬೇಕು. ಅಲ್ಪಸಂಖ್ಯಾತರಿಗೆ ವೃತ್ತಿಪರ ತರಬೇತಿ ಸಿಗಬೇಕು. ಅಲ್ಪಸಂಖ್ಯಾತರಿಗೆ ವ್ಯಾಪಾರ ನಡೆಸಲು ಆರ್ಥಿಕ ನೆರವು ನೀಡಬೇಕು ಎಂದರು.
ಶಾಂತಿ ಕದಡಿದ ಬಳಿಕ ಶಾಂತಿ ಸಮಿತಿಯು ಸಭೆ ಆಗಬಾರದು. ಪ್ರತಿ ಗ್ರಾಮ ಮಟ್ಟದಲ್ಲಿ 2 ತಿಂಗಳಿಗೊಮ್ಮೆ ಶಾಂತಿ ಸಮಿತಿ ಸಭೆ ನಡೆಸಬೇಕು. ಅಲ್ಪಸಂಖ್ಯಾತರಿಗೆ ನೀಡುವ ಸ್ಕಾಲರ್‌ಶಿಪ್‌ನ ಮೊತ್ತವನ್ನು ಹೆಚ್ಚಿಸಬೇಕು. ಜಾತಿ ಸರ್ಟಿಫಿಕೆಟ್ ಪಡೆಯುವಾಗಿನ ಆದಾಯದ ಮಾನದಂಡವನ್ನು ಕೂಡ ಹೆಚ್ಚಿಸಬೇಕು. ಸ್ಕಾಲಲ್‌ಶಿಪ್‌ಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಒಂದು ತಿಂಗಳಿಗೆ ವಿಸ್ತರಿಸಬೇಕು. ಅಲ್ಪಸಂಖ್ಯಾತ ಇಲಾಖಾ ವ್ಯಾಪ್ತಿಗೆ ಒಳಪಡುವ ಮುಸ್ಲಿಂ, ಕ್ರೈಸ್ತ, ಜೈನ, ಬುದ್ಧ, ಪಾರ್ಸಿ ಮುಂತಾದ ಸಮುದಾಯಗಳಿಗೂ ಸಮಾನ ಸವಲತ್ತು ಒದಗಿಸಬೇಕು ಎಂಬ ಆಗ್ರಹ ಸಭೆಯಲ್ಲಿ ಕೇಳಿಬಂತು. ಆಯೋಗದ ವಿಶೇಷ ಅಧಿಕಾರಿ ಜಫಾರಿ ವೇದಿಕೆಯಲ್ಲಿದ್ದರು.
ಬಿಜೆಪಿ ಜನಪ್ರತಿನಿಧಿಗಳಿರುವಲ್ಲಿ ಅಲ್ಪಸಂಖ್ಯಾತರಿಗೆ ಸವಲತ್ತಿಲ್ಲ
ಅಲ್ಪಸಂಖ್ಯಾತರಿಗೆ ಎಲ್ಲಾ ಇಲಾಖೆಗಳಲ್ಲೂ ವಿವಿಧ ಯೋಜನೆಗಳನ್ನು ಪಡೆದುಕೊಳ್ಳಲು ಅವಕಾಶ ಇದೆ. ಆದರೆ ಸಮಪರ್ಕ ವಾಗಿ ಅನುಷ್ಠಾನವಾಗುತ್ತಿಲ್ಲ. ಅದರಲ್ಲೂ ಬಿಜೆಪಿ ಸಂಸದರು, ಶಾಸಕರು ಇರುವಲ್ಲಿ ಅಲ್ಪಸಂಖ್ಯಾತರು ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಮೊಯ್ದಿನಬ್ಬ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಉಡುಪಿಯಲ್ಲಿ ಕಳೆದ 10 ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಸರಿಯಾದ ಸವಲತ್ತುಗಳು ಸಿಗುತ್ತಿಲ್ಲ. ಅಲ್ಪಸಂಖ್ಯಾತರ ಅನುದಾನವನ್ನು ಬಂಟ ಹಾಗೂ ಬಿಲ್ಲವ ಸಮುದಾಯ ಹೆಚ್ಚಾಗಿ ಇರುವ ರಸ್ತೆಗಳಿಗೆ ವರ್ಗಾಯಿಸಲಾಗುತ್ತಿದೆ. ಮಾಹಿತಿ ಹಕ್ಕಿನಲ್ಲಿ ಕೇಳಿದರೂ ಉತ್ತರ ಸಿಗುತ್ತಿಲ್ಲ. ಶಾಸಕರ ಅಧ್ಯಕ್ಷತೆಯ ಸಮಿತಿಯಲ್ಲಿ ಅವರಿಗೆ ಬೇಕಾದವರಿಗೆ ಅನುಕೂಲ ಮಾಡಿಕೊಡುತ್ತಾರೆ. ಇದರ ಬದಲು ಡಿಸಿ ಅಧ್ಯಕ್ಷತೆಯ ಸಮಿತಿ ಫಲಾನುಭವಿಗಳನ್ನು ಆಯ್ಕೆ ಮಾಡುವಂತಾಗಬೇಕು. ಹೊಸದಾಗಿ ಮಸೀದಿ, ಚರ್ಚ್ ನಿರ್ಮಾಣಕ್ಕೂ ಜನಪ್ರತಿನಿಧಿಗಳು, ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಮೊಗವೀರರು ಮಾತ್ರ ಮೀನುಗಾರರಲ್ಲ, ಮುಸ್ಲಿಮರು ಕೂಡ ಮೀನುಗಾರಿಕೆ ಮಾಡುತ್ತಾರೆ. ಹಾಗಾಗಿ ಮೀನುಗಾರರ ಸವಲತ್ತು ಮುಸ್ಲಿಮರಿಗೂ ಸಿಗಬೇಕು ಎಂದು ಒತ್ತಾಯಿಸಿದರು.