×
Ad

ಸುರತ್ಕಲ್‌: ನೊಬೆಲ್ ವರ್ಲ್ಡ್ ರೆಕಾರ್ಡ್ ಸಾಧಕಿ ಅಡ್ಡೂರಿನ ಫಾತಿಮಾ ನಜಾಫ್‌ಗೆ ಸನ್ಮಾನ

Update: 2025-01-20 20:10 IST

ಅಡ್ಡೂರು: ಒಂದು ನಿಮಿಷದಲ್ಲಿ 200 ಪಂಚ್‌ ಮಾಡಿ ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಗೊಂಡು ವಿಶ್ವ ದಾಖಲೆಗೈದಿರುವ ಅಡ್ಡೂರು ನಿವಾಸಿ 11ವರ್ಷದ ಫಾತಿಮಾ ನಜಾಫ್‌ಗೆ ಸುರತ್ಕಲ್‌ ನ ಅಟ್ಲಾಸ್‌ ಜುವೆಲ್ಲರಿ ಗೋಲ್ಡ್‌ ಆ್ಯಂಡ್ ಡೈಮಂಡ್ಸ್ ವತಿಯಿಂದ ಸೋಮವಾರ ಮಳಿಗೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಬಾಲಕಿಯ ಸಾಧನೆಯನ್ನು ಗುರುತಿಸಿ ಅಟ್ಲಾಸ್‌ ಜುವೆಲ್ಲರಿ ಗೋಲ್ಡ್‌ ಆ್ಯಂಡ್ ಡೈಮಂಡ್‌ ವತಿಯಿಂದ ವಜ್ರದ ಉಂಗುರು, ಶಾಲು, ಪ್ರಮಾಣ ಪತ್ರ ಹಾಗೂ ಉಡುಗೊರೆಗಳನ್ನೂ ನೀಡಿ ಗೌರವಿಸಲಾಯಿತು. ಬಾಲಕಿಯನ್ನು ಸನ್ಮಾನಿಸಿ ಮಾತನಾಡಿದ ಸುರತ್ಕಲ್‌ ಪೊಲೀಸ್‌ ಠಾಣೆಯ ಪೊಲೀಸ್‌ ಉಪ ನಿರೀಕ್ಷಕ ರಘು ನಾಯಕ್‌, ಸಮಾಜದಲ್ಲಿ ಬಹಳಷ್ಟು ಜನರು ಸಾಧಕರಿದ್ದಾರೆ. ಅವರನ್ನು ಗುರುತಿಸುವ ಕೆಲಸವನ್ನು ಮೊದಲಾಗಿ ಮನೆಯವರು ಮಾಡಬೇಕು. ಅಂತಹಾ ಸಾಧಕರಿಗೆ ಸಂಘ- ಸಂಸ್ಥೆಗಳು ಹಾಗೂ ಅಟ್ಲಾಸ್‌ ಗೋಲ್ಡ್‌ ಆ್ಯಂಡ್ ಡೈಮಂಡ್‌ ನಂತಹಾ ಸಂಸ್ಥೆಗಳು ಪ್ರೋತ್ಸಾಹ ನೀಡಿದರೆ ಅವರು ಇನ್ನಷ್ಟು ಉನ್ನತ ಮಟ್ಟದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮಕ್ಕಳ ಸಾಧನೆಗೆ ಪೋಷಕರು ಬೆನ್ನೆಲುಬಾಗಿ ನಿಂತರೆ ಮಕ್ಕಳು ಎಂತಹಾ ಸಾಧನೆಯನ್ನೂ ಮಾಡಲು ಹಿಂಜರಿಯರು ಎಂದು ನುಡಿದರು.

ಬಳಿಕ ಮಾತನಾಡಿದ ಅಟ್ಲಾಸ್‌ ಜುವೆಲ್ಲರಿ ಗೋಲ್ಡ್‌ ಆ್ಯಂಡ್ ಡೈಮಂಡ್‌ ಮ್ಯಾನೇಜರ್‌ ಅಬ್ದುಲ್‌ ಸಲಾಂ ಕಾನ, ಬಾಲಕಿಯ ಸಾಧನೆಯನ್ನು ಕೊಂಡಾಡಿದರು. ಅಲ್ಲದೆ, ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಸಾಧನೆಮಾಡುವಂತಾಗಲೆಂದು ಶುಭಹಾರೈಸಿದರು.

ಈ ಸಂದರ್ಭ ಬಾಲಕಿಯ ತಾಯಿ ಜೈನಾನುಝ್ರರೀನಾ, ಸಹೋದರರಾದ ನಬೀಲ್‌ ಹುಸೈನ್‌ ನಾದಾಫ್‌ ಹುಸೈನ್‌, ಮಿಸ್ರಿಯಾ, ಸೌಧ, ಹಸನ್‌ ಮಝರ್‌ ಹಾಗೂ ಅಟ್ಲಾಸ್‌ ಗೋಲ್ಡ್‌ ಆ್ಯಂಡ್ ಡೈಮಂಡ್‌ ಸಿಬ್ಬಂದಿ ಉಪಸ್ಥಿತರಿದ್ದರು. ಸಾಧಕ ಬಾಲಕಿ ಫಾತಿಮಾ ನಜಾಫ್‌ ಅವರು ಅಡ್ಡೂರು ನಿವಾಸಿ ಅಬ್ದುಲ್ ರಝಾಕ್ ನಂದ್ಯಾ ಮತ್ತು ಜೈನಾನುಝ್ರರೀನಾ ದಂಪತಿಯ ಪುತ್ರಿಯಾಗಿದ್ದು, ಅಡ್ಡೂರು ಸಹರಾ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News