ಐಎನ್‌ಟಿಯುಸಿಯ ಬಂದರು ಮತ್ತು ಡಾಕ್ ವರ್ಕರ್ಸ್ ಫೆಡರೇಶನ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಅಬೂಬಕರ್ ಕೃಷ್ಣಾಪುರ ಆಯ್ಕೆ
ಪಣಂಬೂರು: ನವ ಮಂಗಳೂರು ಪೋರ್ಟ್ ಟ್ರಸ್ಟ್ (ಎನ್‌ಎಂಪಿಟಿ) ಮಾಜಿ ಟ್ರಸ್ಟಿಯಾಗಿರುವ ಸುರತ್ಕಲ್ ಕೃಷ್ಣಾಪುರ ನಿವಾಸಿ ಅಬೂಬಕರ್ ಅವರು ಐಎನ್‌ಟಿಯುಸಿಯ ಬಂದರು ಮತ್ತು ಡಾಕ್ ವರ್ಕರ್ಸ್ ಫೆಡರೇಶನ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಜ.19ರಂದು ಮುಂಬೈನಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾಗಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಇಂದು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ತವರಿಗೆ ಆಗಮಿಸಿದ ಅವರನ್ನು ಸುರತ್ಕಲ್ ಮತ್ತು ಕೃಷ್ಣಾಪುರ ನಿವಾಸಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಿಲ್ಲೆ ಮತ್ತು ರಾಷ್ಟ್ರ ಮಟ್ಟದಲ್ಲಿ ದುಡಿಯುವ ವರ್ಗಕ್ಕೆ ಧ್ವನಿಯಾಗುವ ಬದ್ಧತೆಯನ್ನು ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಮಿಕರು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಮತ್ತು ಸ್ಥಳೀಯ ಜನಸಂಖ್ಯೆಗೆ ನ್ಯಾಯಯುತ ಉದ್ಯೋಗಾವಕಾಶಗಳನ್ನು ಖಾತ್ರಿಪಡಿಸಲು ಶ್ರಮಿಸುವುದಾಗಿ ನುಡಿದರು. ಜಿಲ್ಲೆಯ ಅನೇಕ ಕೈಗಾರಿಕೆಗಳು ಮತ್ತು ಕಂಪೆನಿಗಳಲ್ಲಿ ಹೊರರಾಜ್ಯದಿಂದ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಮುಂಬರುವ ಕೋರ್ ಕಮಿಟಿ ಸಭೆಗಳಲ್ಲಿ ಈ ವಿಷಯಕ್ಕೆ ಆದ್ಯತೆ ನೀಡಲಾಗುವುದು. ಜಿಲ್ಲೆಯ ಕೈಗಾರಿಕೆ ಮತ್ತು ಕಂಪೆನಿಗಳಲ್ಲಿ ಜಿಲ್ಲೆಯ ನಿವಾಸಿಗಳಿಗೆ ಉದ್ಯೋಗದಲ್ಲಿ ನ್ಯಾಯಯುತ ಪಾಲನ್ನು ನೀಡುವ ಗುರಿಯನ್ನು ಹೊಂದಿರುವುದಾಗಿ ನುಡಿದರು.
ರಾಜ್ಯ ಐಎನ್‌ಟಿಯುಸಿಯ ಕಾರ್ಯಾಧ್ಯಕ್ಷ ರಾಕೇಶ್ ಮಲ್ಲಿ ಅವರು ಮಾತನಾಡಿ, ನವ ಮಂಗಳೂರು ಬಂದರು ಪ್ರಾಧಿಕಾರದ ಮಾಜಿ ಟ್ರಸ್ಟಿ ಅಬೂಬಕರ್ ಅವರು ಭಾರತೀಯ ರಾಷ್ಟ್ರೀಯ ಬಂದರು ಮತ್ತು ಡಾಕ್ ವರ್ಕರ್ಸ್ ಫೆಡರೇಶನ್ (ಐಎನ್‌ಟಿಯುಸಿ) ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಸಂತೋಷವಾಗಿದೆ. ಭಾರತದ ಎಲ್ಲಾ ಪ್ರಮುಖ ಬಂದರುಗಳ ಎನ್‌ಐಟಿಯುಸಿ ಅಂಗಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ಅಬೂಬಕರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಇದು ಅವರ ಅಚಲ ಬದ್ಧತೆ ಮತ್ತು ಕಾರ್ಮಿಕ ವರ್ಗಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆಗೆ ಅರ್ಹವಾದ ಮನ್ನಣೆಯಾಗಿದೆ ಎಂದರು.
ಈ ಮೊದಲು ಒಡಿಶಾದ ಮಾಜಿ ಸಂಸತ್ ಸದಸ್ಯರಾದ ಪ್ರಭಾತ್ ಸಾಮಂತರಾಯರು ನಾಲ್ಕು ದಶಕಗಳಿಂದ ಎನ್‌ಐಟಿಯುಸಿ ಪೋರ್ಟ್ ಮತ್ತು ಡಾಕ್ ವರ್ಕರ್ಸ್ ಫೆಡರೇಶನ್‌ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಅವರ ಅಕಾಲಿಕ ಮರಣದ ನಂತರ ಈ ಸ್ಥಾನಕ್ಕೆ ಅಬೂಬಕರ್ ಅವರು ಆಯ್ಕೆ ಯಾಗಿದ್ದಾರೆ.