ವಿಶ್ವ ಕೊಂಕಣಿ ಕೇಂದ್ರದ ಪುರಸ್ಕಾರಕ್ಕೆ ಇಬ್ಬರು ಆಯ್ಕೆ
ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದ 2025ನೇ ಸಾಲಿನ ಡಾ.ಪಿ.ದಯಾನಂದ ಪೈ ವಿಶ್ವ ಕೊಂಕಣಿ ರಂಗ ಶ್ರೇಷ್ಟ ಹಾಗೂ ಡಾ.ಪಿ.ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪುರಸ್ಕಾರಕ್ಕೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ.
2025ನೇ ಸಾಲಿನ ಡಾ.ಪಿ.ದಯಾನಂದ ಪೈ ವಿಶ್ವ ಕೊಂಕಣಿ ರಂಗ ಶ್ರೇಷ್ಟ ಪುರಸ್ಕಾರಕ್ಕೆ ಆಯ್ಕೆಯಾದ ಗುಲ್ವಾಡಿ ರಾಮದಾಸ ದತ್ತಾತ್ರೇಯ ಭಟ್ ನಾಟಕ ಕ್ಷೇತ್ರಕ್ಕೆ ಆಕರ್ಷಿತರಾಗಿ ನಿರಂತರ ಎಂಟು ದಶಕಗಳ ಸುದೀರ್ಘ ಹವ್ಯಾಸಿ ರಂಗಕಲಾ ಬದುಕಿನಲ್ಲಿ ಸಾಂಪ್ರದಾಯಿಕ, ವಿಶೇಷವಾಗಿ ಪೌರಾಣಿಕ ನಾಟಕಗಳ (ಪ್ರಚಂಡ ಪರಶು, ಆತ್ಮಲಿಂಗ, ಸಂತ ಜ್ಞಾನೇಶ್ವರ, ತುಲಸಿ ಜಲಂದರ) ಮೇಕ್‌ಅಪ್, ಧ್ವನಿ ಬೆಳಕಿನಿಂದ ಹಿಡಿದು ಸ್ವಂತ ನಾಟಕ ರಚನೆ, ಅಭಿನಯ, ನಿರ್ದೇಶನ ಸಾಮರ್ಥ್ಯಗಳೊಂದಿಗೆ ಮಂಗಳೂರಿಂದ ಮುಂಬೈವರೆಗೂ ಹೆಸರು ಗಳಿಸಿದ್ದಾರೆ.
೨೦೨೫ನೇ ಸಾಲಿನ ಡಾ.ಪಿ.ದಯಾನಂದ ಪೈ ಭಾಷಾನುವಾದ ಪುರಸ್ಕಾರಕ್ಕೆ ಆಯ್ಕೆಯಾದ ಡಾ. ಗೀತಾ ಶೆಣೈ ವಚನ ಸಾಹಿತ್ಯ, ಕನಕದಾಸರ ಸಮಗ್ರ ಸಾಹಿತ್ಯ, ಕುವೆಂಪು ಸಾಹಿತ್ಯ ಹಾಗೂ ಬಹುಭಾಷಾ ಅನುವಾದ ಕಾರ್ಯವಲ್ಲದೆ ೨೧ ಕೊಂಕಣಿ ಕಥೆ- ಕಾದಂಬರಿಗಳನ್ನು ಕನ್ನಡಕ್ಕೆ, ೪ ಕನ್ನಡ ಕೃತಿಗಳನ್ನು ಕೊಂಕಣಿಗೆ, 16 ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕೂ ಅನುವಾದಿಸಿದ್ದಾರೆ. ತಲಾ ೩೦೦ರಷ್ಟು ಸ್ವತಂತ್ರ ಲೇಖನಗಳು, ಅನುವಾದಿತ ಲೇಖನಗಳನ್ನು ಬರೆದಿದ್ದಾರೆ.
ಇಬ್ಬರಿಗೂ ತಲಾ ಒಂದು ಲಕ್ಷ ರೂ.ನಗದಿನೊಂದಿಗೆ ಫೆ.೮ರಂದು ಟಿ.ವಿ.ರಮಣ ಪೈ ಹಾಲ್‌ನಲ್ಲಿ ನಡೆಯುವ ವಿಶ್ವಕೊಂಕಣಿ ನಾಟಕೋತ್ಸವದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.