ಬಂಟ್ವಾಳ: ಕಾಲೇಜು ವಿದ್ಯಾರ್ಥಿಗಳಿಂದ ಗಣರಾಜ್ಯೋತ್ಸವ ಪ್ರಯುಕ್ತ ಸ್ವಚ್ಛತಾ ಕಾರ್ಯ
ಬಂಟ್ವಾಳ : ಸರಕಾರಿ ಪದವಿಪೂರ್ವ ಕಾಲೇಜು ಬಿ.ಮೂಡ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಘಟಕ, ಇಕೋ ಕ್ಲಬ್ ಮತ್ತು ಬಂಟ್ವಾಳ ಲಯನ್ಸ್ ಕ್ಲಬ್ ಇವುಗಳ ಜಂಟಿ ಆಶ್ರಯದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಸ್ವಚ್ಛತಾ ಕಾರ್ಯವನ್ನು ಬಿ.ಸಿ.ರೋಡ್ ಪರಿಸರದಲ್ಲಿ ನಡೆಸಲಾಯಿತು.
ಈ ಸಂದರ್ಭ ಬಿ.ಸಿ.ರೋಡ್ ಸರ್ಕಲ್ ಬಳಿಯಿಂದ ರೈಲು ನಿಲ್ದಾಣದವರೆಗಿನ ಹಳೆಯ ಹೆದ್ದಾರಿಯ ಉಭಯ ಬದಿಗಳಲ್ಲಿನ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಯಿತು.
ಸ್ವಚ್ಛತಾ ಕಾರ್ಯಕ್ಕೆ ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಯೂಸುಫ್ ವಿಟ್ಲ ಚಾಲನೆ ನೀಡಿ ಶಾಲಾ ಕಾಲೇಜುಗಳ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ನಡೆಸುವುದು ಶಿಕ್ಷಣ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿಯಾಗಿದ್ದು ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಮುತುವರ್ಜಿಯಿಂದ ಪ್ರತಿ ವರ್ಷ ಸುತ್ತಮುತ್ತಲ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ರಾಧಾಕೃಷ್ಣ ಅವರು ರಾಷ್ಟ್ರೀಯ ಹಬ್ಬದ ಸಂದರ್ಭದಲ್ಲಿ ಅದೂ ರವಿವಾರದಂದು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸೇರಿ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಸುಮಾರು ಎಪ್ಪತ್ತು ವಿದ್ಯಾರ್ಥಿಗಳು ಸೇವಾಕಾರ್ಯದಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನಾ ನಿರ್ದೇಶಕ ಬಾಲಕೃಷ್ಣ ನಾಯ್ಕ್ ಕೆ, ರೋವರ್ಸ್ ಸ್ಕೌಟ್ ಲೀಟರ್ ಉಪನ್ಯಾಸಕ ಅಬ್ದುಲ್ ರಝಾಕ್, ಇಕೋ ಕ್ಲಬ್ ನಿರ್ದೇಶಕ ದಾಮೋದರ್, ಲಯನ್ ಪ್ರಶಾಂತ್ ಕೋಟ್ಯಾನ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.