×
Ad

ಬಂಟ್ವಾಳ| ಬೇಲಿ ವಿವಾದಕ್ಕೆ ಸಂಬಂಧಿಸಿ ಪಂ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

Update: 2025-02-12 22:30 IST

ಬಂಟ್ವಾಳ : ಬೇಲಿ ವಿವಾದಕ್ಕೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕು ಪಂಚಾಯತ್ ಅಧಿಕಾರಿಗಳನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ.

ಬಂಟ್ವಾಳ ತಾಲೂಕು ಪಂಚಾಯತ್ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್ ಬೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ರಸ್ತೆ ಸಹಿತ ಜಾಗಕ್ಕೆ ಕಬ್ಬಿಣದ ಬೇಲಿ ಹಾಕಿರುವ ಕ್ರಮದ ಬಗ್ಗೆ ಅಧಿಕಾರಿ ವರ್ಗವನ್ನು ಪ್ರಶ್ನಿಸಿದರು. ಸರಕಾರಿ ಕಚೇರಿ ಹಾಗೂ ಇತರ ಕಚೇರಿಗಳಿಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು, ಮತ್ತು ಅಂಬೇಡ್ಕರ್ ಭವನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬರುವ ವಾಹನಗಳು ಎಲ್ಲಿ ಪಾರ್ಕ್ ಮಾಡಬೇಕು ಎಂದು ಅಧಿಕಾರಿಗಳಲ್ಲಿ ಶಾಸಕರು ಪ್ರಶ್ನಿಸಿದರು.

ಸರಕಾರಿ ಜಾಗದಲ್ಲಿ ತಮ್ಮ ಸ್ವಂತ ಜಾಗದಂತೆ ಬೇಲಿ ಹಾಕಲು ನಿಮಗೆ ಅಧಿಕಾರ ನೀಡಿದವರು ಯಾರು ? ಎಂದು ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಾ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಚಿನ್ ಅವರು ರಜೆಯಲ್ಲಿ ಇದ್ದ ಕಾರಣ ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಿ ಬೇಲಿ ವಿಚಾರಕ್ಕೆ ಸಂಬಂಧಿಸಿದಂತೆ ತಕ್ಷಣ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

‌‌‌ಶಾಸಕರ ಜೊತೆ ಸ್ಥಳಕ್ಕೆ ಬಂದಿದ್ದ ಸಾರ್ವಜನಿಕರು ಬೇಲಿ ವಿಚಾರಕ್ಕೆ ಅಧಿಕಾರಿಗಳು ಆಡಿದ ಧರ್ಪದ ಮಾತುಗಳ ಬಗ್ಗೆ ಮಾಹಿತಿ ನೀಡಿದರು. ಜಿ.ಪಂ.ಮಾಜಿ ಸದಸ್ಯ ತುಂಗಪ್ಪ ಬಂಗೇರ, ಪ್ರಮುಖರಾದ ಡೊಂಬಯ್ಯ ಅರಳ, ನ್ಯಾಯವಾದಿ ಗಳಾದ ಅಶ್ವಥ್, ಹಾತಿಂ ಅಹ್ಮದ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News