ಕಾಪು ಯುವ ಕಾಂಗ್ರೆಸ್ ಅಧ್ಯಕ್ಷರ ಬ್ಯಾನರ್‌ಗೆ ಹಾನಿ: ದೂರು ದಾಖಲು
ಕಾಪು : ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್‍ಗೆ ಇತ್ತೀಚೆಗೆ ಆಯ್ಕೆಯಾದ ನೂತನ ಅಧ್ಯಕ್ಷ ಮುಹಮ್ಮದ್ ನಿಯಾಝ್ ಪಡುಬಿದ್ರಿ ಅವರಿಗೆ ಅಭಿನಂದಿಸಲು ಅಳವಡಿಸಿದ ಬ್ಯಾನರ್‍ಗಳಿಗೆ ಕಿಡಿಗೇಡಿಗಳು ಹಾನಿ ಉಂಟು ಮಾಡಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಬಗ್ಗೆ ಕಾಪು ಮತ್ತು ಪಡುಬಿದ್ರಿ ಠಾಣೆಗೆ ದೂರು ನೀಡಿದ್ದಾರೆ.
ಇತ್ತೀಚೆಗೆ ನಡೆದ ಕಾಂಗ್ರೆಸ್ ಪಕ್ಷದ ಯುವ ಕಾಂಗ್ರೆಸಿನ ಆಂತರಿಕ ಚುನಾವಣೆಯಲ್ಲಿ ಕಾಪು ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್‍ನ ಅಧ್ಯಕ್ಷರಾಗಿ ನಿಯಾಝ್ ಪಡುಬದ್ರಿ ಅತೀ ಹೆಚ್ಚಿನ ಅಂತರದಲ್ಲಿ ಚುನಾಯಿತರಾಗಿದ್ದರು. ಈ ಸಂಬಂಧ ಪಕ್ಷದ ರಾಜ್ಯ ಮಟ್ಟದ ನಾಯಕರ ಫೋಟೊದೊಂದಿಗೆ ನಿಯಾಝ್ ಅವರ ಫೋಟೋವನ್ನು ಹಾಕಿ ಅಭಿನಂದನೆಯ ಪ್ಲೆಕ್ಸ್ ಗಳನ್ನು ಸುಮಾರು 25 ಕಡೆಗಳಲ್ಲಿ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಅಳವಡಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಗ್ರಾಮ ಪಂಚಾಯತ್, ಕಾಪು ಪುರಸಭೆ ಹಾಗೂ ಪೊಲೀಸು ಇಲಾಖೆಗಳಿಗೆ ಮಾಹಿತಿ ನೀಡಿ ಅನುಮತಿಯನ್ನು ಪಡೆಯಲಾಗಿತ್ತು.
ಕಿಡಿಗೇಡಿಗಳು ಕಾಪು ವೃತ್ತ ನಿರೀಕ್ಷಕರ ಕಚೇರಿಯ ಎದುರು, ಕಾಪು ಪೊಲಿಪು ಮಸೀದಿಯ ಮುಂದೆ, ಮೂಳೂರು ಬಸ್ ನಿಲ್ದಾಣದ ಬಳಿ, ಉಚ್ಚಿಲ ಪೇಟೆ, ಎರ್ಮಾಳು ಬಸ್ ನಿಲ್ದಾಣದ ಬಳಿ ಮತ್ತು ಪಡುಬಿದ್ರಿ ಪೇಟೆಯಲ್ಲಿ ಹಾಕಿದ ಪ್ಲೆಕ್ಸ್ ಗಳನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕಿಡಿಗೇಡಿಗಳ ವಿರುದ್ಧ ಕಾನೂನುಕ್ರಮಕ್ಕೆ ಅಗ್ರಹಿಸಿ ಪಡುಬಿದ್ರಿ, ಕಾಪು ಪೊಲೀಸ್ ಠಾಣೆ ಹಾಗೂ ಕಾಪು ಇನ್ಸ್‌ಪೆಕ್ಟರ್‍ಗೆ ದೂರು ನೀಡಿದ್ದಾರೆ.