×
Ad

ಕೇಂದ್ರದಿಂದ ಎಷ್ಟು ಅನುದಾನ ಬಿಡುಗಡೆಯಾಗಿದೆ ಉತ್ತರಿಸಲಿ: ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ಸವಾಲು

Update: 2025-02-22 19:13 IST

ಪ್ರಿಯಾಂಕ್ ಖರ್ಗೆ

ಮಂಗಳೂರು: ಬಿಜೆಪಿಯವರಿಗೆ ಕೆಲಸ ಇಲ್ಲ. ಕೆಲಸ ಇಲ್ಲದೆ ಮೈ ಎಲ್ಲ ಪರಚಿಕೊಂಡ ರೀತಿ ಬಿಜೆಪಿಯ ಪರಿಸ್ಥಿತಿಯಾಗಿದೆ. ಅವರು ಮೊದಲು ಸರ್ಕಾರದಿಂದ ಕರ್ನಾಟಕಕ್ಕೆ ಎಷ್ಟು ಅನುದಾನ ಬಿಡುಗಡೆ ಮಾಡಿಸಿದ್ದಾರೆ ಎಂದು ಮೊದಲು ಉತ್ತರಿಸಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಯವರಿಗೆ ಸವಾಲು ಹಾಕಿದ್ದಾರೆ.

ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ಹೊಂಬೆಳಕು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರ ಪ್ರಶ್ನೆ ಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದರು.

ಕೇಂದ್ರದಿಂದ ರಾಜ್ಯಕ್ಕೆ ಹಣ ಬರುತ್ತಿಲ್ಲ. ಕೇಂದ್ರದ ಪಾಲಿನ ಹಣ ಸಹ ನಾವೇ ಕೊಡುತ್ತಿದ್ದೇವೆ ಎಂದು ಹೇಳಿದ ಅವರು, ಜಲಜೀವನ್ ಮಿಷನ್‌ನಡಿ ರಾಜ್ಯಕ್ಕೆ 36,00 ಕೋಟಿ ರೂ. ಕೇಂದ್ರ ಕೊಡಬೇಕಿತ್ತು. ನಮಗೆ ಬಂದಿರುವುದು ಕೇವಲ 517 ಕೋಟಿ ರು. ಕುಡಿಯುವ ನೀರಿನ ಯೋಜನೆಯನ್ನು ನಿಲ್ಲಿಸಬಾರದು ಎಂದು ನಮ್ಮ ರಾಜ್ಯ ಸರ್ಕಾರವೇ 2,900 ಕೋಟಿ ರೂ. ನೀಡಿದೆ. ಹೆಸರು ಮಾತ್ರ ಬಿಜೆಪಿಯವರದ್ದು, ಆದರೆ ದುಡ್ಡು ನಮ್ಮದು. ನಮಗೆ ತೆರಿಗೆ ಹಾಗೂ ಜಿಎಸ್‌ಟಿ ಪಾವತಿ ಯಲ್ಲಿ ಕೇಂದ್ರ ಅನ್ಯಾಯ ಮಾಡುತ್ತಿದೆ. ಜಿಎಸ್‌ಟಿ ಪಾವತಿಯಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದರೂ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಕರ್ನಾಟಕಕ್ಕೆ ಬಿಡಿಗಾಸು ನೀಡುತ್ತಿದ್ದಾರೆ. ಆದರೆ ಉತ್ತರ ಪ್ರದೇಶ, ಬಿಹಾರ್ ರಾಜ್ಯಗಳಿಗೆ ಕೋಟ್ಯಂತರ ರೂ. ಕೇಂದ್ರ ನೀಡುತ್ತಿದೆ. ಕೇಂದ್ರ ಸರ್ಕಾರದಿಂದದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಕ್ಕೆ ಬಿಜೆಪಿ ಮೊದಲು ಧ್ವನಿ ಎತ್ತಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಮಾಧ್ಯಮದಲ್ಲಿ ಹೇಳಿಕೆ ಕೊಟ್ಟರೆ ಸಚಿವರ ಬದಲಾವಣೆ ಆಗಲ್ಲ. ಮುಖ್ಯಮಂತ್ರಿಗಳು ಸದ್ಯಕ್ಕೆ ಸಿದ್ದರಾಮಯ್ಯನವರೇ ಇರುತ್ತಾರೆ. ಉಪ ಮುಖ್ಯಮಂತ್ರಿಗಳು ಸದ್ಯಕ್ಕೆ ಡಿಕೆ ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷರೂ ಕೂಡ ಅವರೇ ಆಗಿರುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ರೇಸ್‌ನಲ್ಲಿ ಡಿಕೆ ಶಿವಕುಮಾರ್ ಇದ್ದಾರೆ, ಸಿಎಂ ಬದಲಾವಣೆ ಸ್ಪಲ್ಪ ಸಮಯ ಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು.

ಸಚಿವರು, ಶಾಸಕರಾಗಿ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಭೇಟಿಯಾಗೋದು ತಪ್ಪಾ?

ಮುಂದಿನ ಚುನಾವಣೆ ತನ್ನ ನೇತೃತ್ವದಲ್ಲೇ ಎಂದು ಡಿಕೆಶಿ ಹೇಳಿಕೆ ನೀಡಿದ್ದಾರೆ. ಅವರು ಹಿರಿಯ ನಾಯಕರು, ಈಗ ಡಿಸಿಎಂ ಆಗಿದ್ದಾರೆ, ನಾವು ಸಾಮೂಹಿಕ ನಾಯಕತ್ವದಲ್ಲೇ ಹೋಗುತ್ತಿದ್ದೇವೆ. ಡಿಕೆಶಿಯವರ ನಾಯಕತ್ವದಲ್ಲೂ ಹೋಗು ತ್ತೇವೆ, ಸಿದ್ದರಾಮಯ್ಯ ಅವರ ನಾಯಕತ್ವದಲ್ಲೂ ಹೋಗುತ್ತೇವೆ ಎಂದರು.

ಸತೀಶ್ ಜಾರಾಕಿಹೊಳಿ ಲೋಕೋಪಯೋಗಿ ಸಚಿವ, ಪ್ರಿಯಾಂಕ್ ಖರ್ಗೆ ಗ್ರಾಮೀಣ ಅಭಿವೃದ್ಧಿ ಸಚಿವನಾಗಿದ್ದೇನೆ. ನಮಗೆ ಎಲ್ಲ ಜವಾಬ್ದಾರಿಗಳನ್ನು ಹೈಕಮಾಂಡ್ ತೀರ್ಮಾನ ಮಾಡಿ ನೀಡಿದೆ. ನಮ್ಮ ಜವಾಬ್ದಾರಿಗಳನ್ನು ನಾವು ಸರಿಯಾಗಿ ನಿಭಾ ಯಿಸುತ್ತಿದ್ದೇವೆ. ಸಿಎಂ ಬದಲಾವಣೆ ಎಲ್ಲಿ ಆಗಬೇಕು? ಯಾವಾಗ ಆಗಬೇಕು? ಎಲ್ಲಿಂದ ಆಗಬೇಕು? ಯಾರಿಂದ ಆಗ ಬೇಕು? ಯಾವಾಗ ಆಗುತ್ತೆ ಎಂಬುದು ಗೊತ್ತಿಲ್ಲ. ಎಐಸಿಸಿಯವರು ಎಲ್ಲ ಮಂತ್ರಿಗಳ ವರದಿ ರಿಪೋರ್ಟ್ ಕಾರ್ಡ್ ತೆಗೆದು ಕೊಂಡಿದ್ದಾರೆ. ಅದರಲ್ಲಿ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಎಷ್ಟು ಈಡೇರಿಸಿದ್ದೀರಿ? ಯಾವ ಹೊಸ ನೀತಿಗಳನ್ನು ಜಾರಿಗೆ ತಂದಿದ್ದೀರಿ? ಎಷ್ಟು ಅನುದಾನ ತಂದಿದ್ದೀರಾ? ಏನು ವಿನೂತನ ಕಾರ್ಯಕ್ರಮ ಮಾಡಿದ್ದೀರಾ ಎನ್ನುವ ಮಾಹಿತಿ ಯನ್ನು ಎಐಸಿಸಿ ಪಡೆದುಕೊಂಡಿದೆ. ರಿಪೋರ್ಟ್ ಕಾರ್ಡ್ ನಾವು ಇಬ್ಬರಿಗೆ ಕೊಡಬೇಕಿರೋದು. ಒಂದು ಹೈಕಮಾಂಡ್‌ಗೆ, ಇನ್ನೊಂದು ಜನರಿಗೆ ಎಂದರು.

ಡಿಸಿಎಂ ಡಿಕೆಶಿ ಅವರು ಹೈಕಮಾಂಡ್ ಭೇಟಿ ಮಾಡಿರುವುದು ಸರಿ ಎಂದ ಸಚಿವ ಪ್ರಿಯಾಂಕ್ ಖರ್ಗೆ, ನಾವು ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡದೆ ಕೇಶವ ಕೃಪಾ ಅಥವಾ ಮೋದಿ ಅಥವಾ ಜೆ.ಪಿ. ನಡ್ಡಾರನ್ನು ಭೇಟಿಯಾಗೋದಕ್ಕೆ ಆಗುತ್ತಾ? ನಾವು ಹೋಗಿ ಭೇಟಿಯಾಗೋದು ಸುರ್ಜೆವಾಲ, ವೇಣುಗೋಪಾಲ್, ಖರ್ಗೆ, ರಾಹುಲ್ ಗಾಂಧಿಯವರನ್ನು. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಗೃಹ ಲಕ್ಷ್ಮಿ ಯೋಜನೆ ಹಣ ನೀಡಲು ವಿಳಂಬವಾಗಿರುವುದು ನಿಜ. ಈ ವಾರದಲ್ಲಿ ಹಣ ಪಾವತಿಯಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಹಾಗಿರುವಾಗ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿಭಾಗ್ಯ ಎಂದ ಬಿಜೆಪಿಯವರು ಯಾಕೆ ಪ್ರಶ್ನಿಸುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News