×
Ad

ದ.ಕ. ಜಿಲ್ಲೆಗೊಂದು ಸರಕಾರಿ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಲಿ: ವಿಜಯ್ ಕುಮಾರ್

Update: 2025-02-22 21:10 IST

ಮಂಗಳೂರು: ಸರಕಾರಗಳಿಗೆ, ಶಾಸಕ, ಸಂಸದರುಗಳಿಗೆ ಇಚ್ಛಾಶಕ್ತಿ ಇರುತ್ತಿದ್ದರೆ ಕನಿಷ್ಟ ದ.ಕ.ಜಿಲ್ಲೆಯಲ್ಲೊಂದು ಸರಕಾರಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜು ಇರುತ್ತಿತ್ತು ಎಂದು ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಹೇಳಿದರು.

ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ), ಸರ್ವ ಕಾಲೇಜು ವಿದ್ಯಾರ್ಥಿಗಳ ಸಮನ್ವಯ ಸಮಿತಿ, ಸರ್ವ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಂಘಗಳ ಜಂಟಿ ಆಶ್ರಯದಲ್ಲಿ ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ನಡೆದ ದ.ಕ. ಜಿಲ್ಲಾ ಮಟ್ಟದ ವಿದ್ಯಾರ್ಥಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣದ ಕಾಶಿಯಾಗಿರುವ ದ.ಕ ಜಿಲ್ಲೆಯಲ್ಲಿ ಸರಕಾರಿ ಶಾಲಾ ಕಾಲೇಜು ಮೂಲಭೂತ ಸೌಕರ್ಯಗಳಿಲ್ಲದೆ ಸೊರಗುತ್ತಿದೆ. ವಿದ್ಯಾರ್ಥಿಗಳಿಲ್ಲ ಎಂಬ ನೆಪ ನೀಡಿ ಸರಕಾರ ವಿಶ್ವವಿದ್ಯಾನಿಲಯಗಳನ್ನೇ ಮುಚ್ಚುವ ತೀರ್ಮಾನ ಕೈಗೊಳ್ಳುತ್ತಿರುವುದು ದುರಂತ. ಇಲ್ಲೊಂದು ಕನಿಷ್ಟ ಸರಕಾರಿ ಮೆಡಿಕಲ್ ಕಾಲೇಜು ಇರುತ್ತಿದ್ದರೆ ಸರಕಾರಿ ಜಿಲ್ಲಾಸ್ಪತ್ರೆಗಳಿಂದ ಹಿಡಿದು ಪ್ರಾಥ ಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಗಳನ್ನು ನೀಗಿಸಬಹುದಿತ್ತು. ಸರಕಾರ ಪ್ರತೀ ಜಿಲ್ಲೆಯಲ್ಲೊಂದು ಸರಕಾರಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಲು ಮುಂದಾಗಬೇಕು ಎಂದು ವಿಜಯಕುಮಾರ್ ಒತ್ತಾಯಿಸಿದರು.

ಸಮಾವೇಶದಲ್ಲಿ ಎಸ್‌ಎಫ್‌ಐ ದ.ಕ.ಜಿಲ್ಲಾ ನೂತನ ಸಮಿತಿಯ ಅಧ್ಯಕ್ಷರಾಗಿ ಇನಾಝ್ ಬಿ.ಕೆ., ಕಾರ್ಯದರ್ಶಿಯಾಗಿ ವಿನುಶಾ ರಮಣ ಅವರನ್ನು ಆಯ್ಕೆ ಮಾಡಲಾಯಿತು.

ಸಮಾವೇಶದ ಅಧ್ಯಕ್ಷತೆಯನ್ನು ವಿನುಶಾ ರಮಣ ವಹಿಸಿದ್ದರು. ವೇದಿಕೆಯಲ್ಲಿ ಎಸ್‌ಎಫ್‌ಐ ಮಾಜಿ ಮುಖಂಡ ಸಂತೋಷ್ ಬಜಾಲ್, ರಾಜ್ಯ ಸಮಿತಿ ಸದಸ್ಯ ತಿಲಕ್‌ರಾಜ್ ಕುತ್ತಾರ್, ಸರ್ವ ಕಾಲೇಜು ವಿದ್ಯಾರ್ಥಿಗಳ ಸಮನ್ವಯ ಸಮಿತಿಯ ಉಪಾಧ್ಯಕ್ಷೆ ನಿರೀಕ್ಷಿತಾ, ಸರ್ವ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮುಸ್ಕಾನ್, ಎಸ್‌ಎಫ್‌ಐ ಮುಖಂಡ ಶಿವಾನಿ ಕುತ್ತಾರ್ ಉಪಸ್ಥಿತರಿದ್ದರು.

ಎಸ್‌ಎಫ್‌ಐ ಮುಖಂಡರಾದ ಕೋಶ್ ಸ್ವಾಗತಿಸಿದರು. ರೇವಂತ್ ಕದ್ರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News