×
Ad

ವಿಟ್ಲ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ: ಹಲವು ಬೇಡಿಕೆಗಳ ಈಡೇರಿಗೆ ಒತ್ತಾಯ

Update: 2025-02-27 20:44 IST

ವಿಟ್ಲ: ವಿದ್ಯಾ ಸಂಸ್ಥೆ ನಿರ್ಮಾಣಕ್ಕೆ ಯೋಗ್ಯವಲ್ಲದ ಜಾಗದಲ್ಲಿ ಆಕ್ಷೇಪಗಳ ನಡುವೆ ಒಪ್ಪಿಗೆ ನೀಡುವ ಅವಶ್ಯಕತೆ ಏನು? ಪುರಸಭೆಯಲ್ಲಿ ಇಲ್ಲದ ಕಾನೂನು ಪಟ್ಟಣ ಪಂಚಾಯಿತಿಯಲ್ಲಿ ಯಾಕಿದೆ? ತೆರಿಗೆ ಹಾಕಿದ ತಕ್ಷಣ ಎಲ್ಲಾ ಅಭಿವೃದ್ಧಿಯನ್ನು ಮಾಡಲು ಸಾಧ್ಯವಾ? ದಿನಕ್ಕೆ ಮೂರು ಖಾತೆಯೂ ಆಗದಲ್ಲಿ 90ದಿನದೊಳಗೆ ಬಿ ಖಾತೆ, ಇ ಖಾತೆ ಮಾಡಲು ಸಾಧ್ಯವಾ? ವಾಣಿಜ್ಯ ಉದ್ದೇಶದ ಕಟ್ಟಡಗಳಿಂದ ಸರಿಯಾಗಿ ತೆರಿಗೆ ಸಂಗ್ರಹ ಕಾರ್ಯ ನಡೆಯಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯರು ಆಗ್ರಹಿಸಿದರು.

ವಿಟ್ಲ ಪಟ್ಟಣ ಪಂಚಾಯಿತ್ತಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಹಲವು ಬೇಡಿಕೆಗಳನ್ನು ಮುಂದಿಟ್ಟರು.

ದುಪ್ಪಟ್ಟು ತೆರಿಗೆ ವಿಧಿಸುವುದು, ದಾಖಲೆಗಾಗಿ ಅಲೆದಾಡಿಸುವುದರಿಂದ 5 ಸೆಂಟ್ಸ್ ಒಳಗೆ ಮನೆ ನಿರ್ಮಾಣ ಮಾಡುವ ಬಡವರಿಗೆ ಸಮಸ್ಯೆಯಾಗುತ್ತದೆ. ಖಾತೆ ಮಾಡುವುದಕ್ಕೆ ಇಬ್ಬರಿಗೆ ಚಾರ್ಜ್ ನೀಡಿದರೂ, ಇಲ್ಲಿಯವರೆಗೆ ಒಂದು ಖಾತೆಯೂ ಚಾಲೂ ಆಗಿಲ್ಲ. ದಿನದಲ್ಲಿ 5 ಖಾತೆಗಳು ಎಲ್ಲಾ ಟೇಬಲ್ ಗೆ ಹೋಗಿ ಫಲಾನುಭವಿಗೆ ದಾಖಲೆ ಸಿಗುವಂತಾಗಬೇಕು. ರಾಜ್ಯದಲ್ಲೇ ಸಿಬ್ಬಂದಿಯ ಕೊರತೆವಿದ್ದು, ಇರುವ ಸಿಬ್ಬಂದಿಯಲ್ಲಿ ಕೆಲಸ ನಿರ್ವಹಿಸಬೇಕು. ಟಪ್ಪಾಲ್ ಸ್ವೀಕೃತಿಗೆ ಸರಿಯಾದ ಮಾಹಿತಿ ಇರುವವರನ್ನೇ ನೇಮಕ ಮಾಡಬೇಕು ಎಂಬ ಬೇಡಿಕೆ ಬಂತು.

ಪಳಿಕೆಯಲ್ಲಿ ವಿದ್ಯಾಸಂಸ್ಥೆ ಕಟ್ಟಡದ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿ ನಿರ್ಣಯ ಮಾಡಲಾಗಿದ್ದು, ಅದನ್ನು ಬರೆಯುವ ಸಂದರ್ಭ ತಿರುಚಲಾಗಿದೆ. ಆ ಜಾಗದ ಸಮೀಪದಲ್ಲಿ ಜನತಾ ಕಾಲೋನಿ, ವಿಟ್ಲ ಸ್ಮಶಾನ, ಪಟ್ಟಣ ಪಂಚಾಯಿತಿ ನಿವೇಶನವಿದೆ. ಮೂಲಭೂತ ಸೌಕರ್ಯ ಇಲ್ಲದಿದ್ದರೂ ಅನುಮತಿ ನೀಡಿರುವುದು ತಪ್ಪು. ಬೇಕಾದಷ್ಟು ಸ್ಥಳಾವಕಾಸ ಇರುವ ಕಡೆ ಅವರು ವಿದ್ಯಾಸಂಸ್ಥೆ ಮಾಡಲಿ ನಾವು ಸ್ವಾಗತಿಸುತ್ತೇವೆ. ಆದರೆ ಸದಸ್ಯರುಗಳ ಆಕ್ಷೇಪಣೆಗಳಿಗೆ ಬೆಲೆ ನೀಡದೆ ಅವರಿಗೆ ಪರವಾನಿಗೆ ನೀಡಿರುವುದರ ಬಗ್ಗೆ ವಿರೋಧ ವ್ಯಕ್ತವಾಯಿತು.

ಆಕ್ಷೇಪಣೆ ಇದ್ದರೂ ಒಪ್ಪಿಗೆ ನೀಡಿರುವ ಉದ್ದೇಶ ಏನು...? ಕೊಟ್ಟಿದ್ದು ಯಾಕೆ...? ಇದರಲ್ಲಿ ಅಕ್ರಮ ನಡೆದಿದೆ. ಯಾರು ಆ ಕೃತ್ರಿಮ ಮಾಡಿದ್ದಾರೋ ಅವರ ವಿರುದ್ಧ ತನಿಖೆಗೆ ಲೋಕಾಯುಕ್ತ ಬರೆಯಬೇಕು. ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ಪತ್ರಿಕಾ ಪ್ರಕಟಣೆ ನೀಡಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ, ಆಕ್ಷೇಪಣೆಗಳು ಬಂದ ಮೇಲೆಯೂ ಅದಕ್ಕೆ ಪರವಾನಿಗೆ ನೀಡಿರುವುದು ಅಪರಾಧ. ತೆರಿಗೆಯನ್ನು ಕಟ್ಟುನಿಟ್ಟಿನಲ್ಲಿ ಸಂಗ್ರಹ ಮಾಡಿದರೆ, ಅಭಿವೃದ್ಧಿ ಕಾರ್ಯಕ್ಕೆ ಬೇಕಾದ ಅನುದಾನಕ್ಕೆ ಸಮಸ್ಯೆಯಾಗುವುದಿಲ್ಲ. ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಒಂದು ತಿಂಗಳು ಆದರೂ ಕ್ರಮ ಆಗದಿದ್ದರೆ, ಸಭೆಯ ಉದ್ದೇಶವೇನು? ಎಂದು ಅಭಿಪ್ರಾಯ ಕೇಳಿ ಬಂತು. ವಿಟ್ಲದ ಚರ್ಚ್ ಬಳಿ ವಾಚಾನಾಲಯಕ್ಕೆ ಅನುಮತಿ ಪಡೆದು ಅಲ್ಲಿ ಮುಸ್ಲಿಮರ ಪ್ರಾರ್ಥನೆ, ಅಝಾನ್ ಮಾಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು. ಈ ಸಂದರ್ಭ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಭಾರೀ ವಾಗ್ವಾದ ನಡೆಯಿತು. ಬಳಿಕ ಈ ಬಗ್ಗೆ ಅಲ್ಲಿಯ ಸಂಬಂಧಪಟ್ಟವರಲ್ಲಿ ವಿಚಾರಿಸಿ, ನೋಟಿಸ್ ನೀಡಲಾಗುವುದು ಎಂದು ರ್ನಿಣಯಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಸದಸ್ಯರಾದ ವಿಕೆಎಂ ಅಶ್ರಫ್, ಅರುಣ್ ಎಂ ವಿಟ್ಲ, ಹಸೈನಾರ್ ನೆಲ್ಲಿಗುಡ್ಡೆ, ಅಶೋಕ್ ಕುಮಾರ್ ಶೆಟ್ಟಿ, ಹರೀಶ್ ಸಿ.ಎಚ್, ಡೀಕಯ್ಯ, ಜಯಂತ ಸಿ.ಎಚ್, ಕೃಷ್ಣ, ವಸಂತ, ರಕ್ಷಿತ, ಶಾಕೀರ, ಸುನೀತ, ವಿಜಯಲಕ್ಷ್ಮೀ, ಪದ್ಮಿನಿ, ಲತಾವೇಣಿ, ನಾಮನಿರ್ದೇಶಕ ಸದಸ್ಯ ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಶ್ರೀನಿವಾಸ ಶೆಟ್ಟಿ ಕೊಲ್ಯ, ಸುನೀತಾ ಕೋಟ್ಯಾನ್, ಮುಖ್ಯಾಧಿಕಾರಿ ಕರುಣಾಕರ, ಸಮುದಾಯ ಸಂಘಟನಾದಿಕಾರಿ ಶ್ರೀಶೈಲ ಸಂಕನ ಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News