ಸುರತ್ಕಲ್ ವಲಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರ: ಸಿಪಿಐಎಂ ನಿಂದ ಪ್ರತಿಭಟನೆಯ ಎಚ್ಚರಿಕೆ
ಸುರತ್ಕಲ್: ಮಂಗಳೂರು ನಗರ ಪಾಲಿಕೆಯ ಸುರತ್ಕಲ್ ವಲಯ ಇರ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಗಂಭೀರ ವಾಗಿ ಉಲ್ಭಣಗೊಂಡಿದ್ದು, ನಗರ ಪಾಲಿಕೆಯ ಆಡಳಿತ ಬೇಜವಾಬ್ದಾರಿತನ ತೊರೆದು ತಕ್ಷಣವೆ ಸಮಸ್ಯೆ ಪರಿಹರಿಸಬೇಕು ಇಲ್ಲವಾದಲ್ಲಿ ಸಂತ್ರಸ್ತ ನಾಗರಿಕರನ್ನು ಸೇರಿಸಿ ನಗರ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದು ಸಿಪಿಐಎಂ ಸುರತ್ಕಲ್ ವಿಭಾಗ ಸಮಿತಿ ಎಚ್ಚರಿಸಿದೆ.
ಮಹಾನಗರ ಪಾಲಿಕೆಯ ಕಾಟಿಪಳ್ಳ, ಕೃಷ್ಣಾಪುರ, ಕಾನ, ಕುಳಾಯಿ ಸೇರಿದಂತೆ ಸುರತ್ಕಲ್ ವಲಯ ವ್ಯಾಪ್ತಿಯ ಪ್ರದೇಶ ಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಗಂಭೀರ ಸಮಸ್ಯೆ ಉದ್ಭವವಾಗಿದೆ. ಕೆಲವು ವಾರ್ಡ್ ಗಳಲ್ಲಿ ವಾರಗಳ ಕಾಲ ನೀರು ಪೂರೈಕೆಯಾಗದಿರುವ, ಮೂರು ದಿನಗಳಿಗೊಮ್ಮೆ ಕೆಲವು ಗಂಟೆಗಳ ಕಾಲ ಮಾತ್ರ ನೀರು ಪೂರೈಕೆಯಾಗುವ ಸ್ಥಿತಿ ಇದೆ. ಇದರಿಂದ ಜನ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಈ ಕುರಿತು ಹಲವು ದೂರುಗಳು ಮನಪಾಕ್ಕೆ ಸಲ್ಲಿಸಿದ್ದರೂ ನಗರ ಪಾಲಿಕೆ ಅಧಿಕಾರಿಗಳು ಸಮಸ್ಯೆ ಬಗೆಹರಿಸುತ್ತಿಲ್ಲ.
ಸುರತ್ಕಲ್ ವಲಯದ ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಅನಧಿಕೃತ ರೇಷನಿಂಗ್ ಪದ್ಧತಿ ಜಾರಿಯಲ್ಲಿದೆ. ಕಳೆದ ಮಳೆಗಾಲದಲ್ಲಿ ಡ್ಯಾಂಗಳಲ್ಲಿ ನೀರು ಶೇಖರಣೆಗೊಂಡ ತರುವಾಯ, ಮಂಗಳೂರು ನಗರ ವ್ಯಾಪ್ತಿಯಲ್ಲಿ ಮೂರು ದಿನಕ್ಕೊಮ್ಮೆ ನೀರು ಪೂರೈಸುವ ರೇಷನಿಂಗ್ ಪದ್ಧತಿ ಕೈ ಬಿಡಲಾಗಿತ್ತು. ಪ್ರತಿದಿನ ನೀರು ಪೂರೈಕೆಯ ನೀತಿ ಜಾರಿಗೆ ಬಂದಿತ್ತು. ಆದರೆ, ಸುರತ್ಕಲ್ ವಲಯದಲ್ಲಿ ಮಾತ್ರ ಮೂರು ದಿನಕ್ಕೊಮ್ಮೆ ನೀರು ಪೂರೈಸುವ ರೇಷನಿಂಗ್ ಪದ್ಧತಿ ಅನಧಿಕೃತವಾಗಿ ಈವರೆಗೂ ಮುಂದುವರಿದಿದೆ.
ಜೊತೆಗೆ ಕೆಲವು ವಾರ್ಡ್ ಗಳಲ್ಲಿ ನಾಲ್ಕೈದು ದಿನಗಳಿಗೊಮ್ಮೆ ನೀರು ಪೂರೈಸುವ, ಹಲವು ಪ್ರದೇಶಗಳಲ್ಲಿ ವಾರಗಳ ಕಾಲ ನೀರು ಪೂರೈಕೆ ಆಗದಿರುವುದೂ ನಡೆಯುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ದೂರು ನೀಡಿದರೆ ಪ್ರತಿಕ್ರಿಯಿಸದಿರುವುದು, ಹಾರಿಕೆಯ ಉತ್ತರ ನೀಡುವುದು, ಜಲಸಿರಿ ಕಾಮಗಾರಿಯ ನೆಪ ಹೇಳಿ ಜಾರಿಕೊಳ್ಳುವುದೂ ನಡೆಯುತ್ತಿದೆ. ನೀರು ಸರಬರಾಜಿನ ಪೈಪ್ ಗಳು ಒಡೆದಲ್ಲಿ ಗಂಟೆಗಳಲ್ಲಿ ಮಾಡಬೇಕಾದ ರಿಪೇರಿಗಳಿಗೆ ಮೂರ್ನಾಲ್ಕು ದಿನಗಳ ದೀರ್ಘ ಅವಧಿ ಪಡೆದು ಸತಾಯಿಸಲಾಗುತ್ತಿದೆ. ಕುಡಿಯುವ ನೀರು ಪೂರೈಸುವ ಡ್ಯಾಂಗಳು ಭರ್ತಿ ಆಗಿರುವ ಈ ಅವಧಿಯಲ್ಲಿ ಈ ರೀತಿ ನೀರಿಗೆ ಕೃತಕ ಅಭಾವ ಉಂಟಾಗಿರುವುದು ಜನ ಬೇಸತ್ತು ಹೋಗಿದ್ದಾರೆ. ಜನಪ್ರತಿನಿಧಿಗಳೂ ಈ ಕುರಿತು ತಮ್ಮ ಜವಾಬ್ದಾರಿ ಮರೆತಿರುವುದು ಕುಡಿಯುವ ನೀರಿನ ಸಮಸ್ಯೆಯನ್ನು ಮತ್ತಷ್ಟು ಗಂಭೀರವಾಗಿಸಿದೆ. ಅದರಲ್ಲೂ ಕಾಟಿಪಳ್ಳ, ಕೃಷ್ಣಾಪುರ, ಕುಳಾಯಿ, ಕಾನ ಮುಂತಾದ ವಾರ್ಡ್ ಗಳಲ್ಲಿ ಸಮಸ್ಯೆ ಅತೀ ಹೆಚ್ಚಾಗಿದೆ.
ನಗರ ಪಾಲಿಕೆಯ ಆಡಳಿತ ಬೇಜವಾಬ್ದಾರಿತನ ತೊರೆದು ತಕ್ಷಣವೇ ಈ ಭಾಗದ ಕುಡಿಯುವ ನೀರು ಸರಬರಾಜಿನ ಸಮಸ್ಯೆಗಳನ್ನು ಬಗೆಹರಿಸಬೇಕು. ಮೂರು ದಿನಗಳಿಗೊಮ್ಮೆ ನೀರು ಪೂರೈಸುವ ಅನಧಿಕೃತ, ಅನ್ಯಾಯದ ರೇಷನಿಂಗ್ ಪದ್ಧತಿಯನ್ನು ಕೈ ಬಿಟ್ಟು ನಿಯಮದಂತೆ ಪ್ರತಿ ದಿನ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದದಲ್ಲಿ ಇಲ್ಲದಿದ್ದಲ್ಲಿ ಸಂತ್ರಸ್ತ ನಾಗರಿಕರನ್ನು ಸೇರಿಸಿ ನಗರ ಪಾಲಿಕೆಗೆ ಮುತ್ತಿಗೆ ಹಾಕು ಪ್ರತಿಭಟನೆ ನಡೆಸಲಾಗುವುದು ಎಂದು ಸಿಪಿಐಎಂ ಸುರತ್ಕಲ್ ವಿಭಾಗ ಸಮಿತಿಯ ಕಾರ್ಯದರ್ಶಿ ಶ್ರೀನಾಥ್ ಕುಲಾಲ್ ಎಚ್ಚರಿಸಿದ್ದಾರೆ.