ಕಮ್ಯುನಿಸ್ಟ್ ಪಕ್ಷದ ಹಿರಿಯ ಮುಖಂಡ ಹಮೀದ್ ನಿಧನ
Update: 2025-03-09 21:11 IST
ಮಂಗಳೂರು: ಪಾವೂರು-ಹರೇಕಳ ಗ್ರಾಮದ ಗಡಿಪ್ರದೇಶವಾದ ಖಂಡಿಗ ಎಂಬಲ್ಲಿನ ನಿವಾಸಿ, ಕಮ್ಯುನಿಸ್ಟ್ ಪಕ್ಷದ ಹಿರಿಯ ಮುಖಂಡ ಕೆ.ಎಚ್. ಹಮೀದ್ (74) ರವಿವಾರ ರಾತ್ರಿ ತನ್ನ ಮನೆಯಲ್ಲಿ ನಿಧನರಾದರು.
ಪತ್ನಿ, ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ಕಮ್ಯುನಿಸ್ಟ್ ಹಮೀದಾಕ ಎಂದೇ ಸ್ಥಳೀಯವಾಗಿ ಗುರುತಿಸಲ್ಪಟ್ಟಿರುವ ಕೆ.ಎಚ್.ಹಮೀದ್ ಹರೇಕಳ-ಪಾವೂರು ಗ್ರಾಮದ ಜನಪರ ಹೋರಾಟಗಾರರಲ್ಲಿ ಒಬ್ಬರಾಗಿದ್ದರು. ತನ್ನ 14ನೆ ಹರೆಯದಲ್ಲೇ ಭೂಮಾಲಕರ ವಿರುದ್ಧ ಹೋರಾಟಕ್ಕಿಳಿದಿದ್ದ ಕೆ.ಎಚ್.ಹಮೀದ್ ತನ್ನ ಸಿದ್ಧಾಂತವನ್ನು ಎಂದೂ ಬಿಟ್ಟುಕೊಡದ ವ್ಯಕ್ತಿಯಾಗಿದ್ದರು. ಯಾರೊಂದಿಗೂ ರಾಜಿಮಾಡಿಕೊಳ್ಳದ ಪೊಲೀಸ್ ದೌರ್ಜನ್ಯವನ್ನು ಮೆಟ್ಟಿ ನಿಂತವರು. ಪರಿಸರದ ಎಲ್ಲೇ ಅನ್ಯಾಯವದರೂ ಕೂಡ ಸೆಟೆದು ನಿಲ್ಲುವ ವ್ಯಕ್ತಿಯಾಗಿದ್ದರು.
ಸೋಮವಾರ ಬೆಳಗ್ಗೆ ಆಲಡ್ಕ ಬದ್ರಿಯಾ ಜುಮಾ ಮಸೀದಿಯ ಆವರಣದಲ್ಲಿ ದಫನ ಕಾರ್ಯ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.