×
Ad

ಡ್ರಗ್ಸ್ ಮಾಫಿಯಾ ವಿರುದ್ಧ ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿದ ಸಂಸದ ಬ್ರಿಜೇಶ್ ಚೌಟ

Update: 2025-03-18 22:56 IST

ಮಂಗಳೂರು: ಕರ್ನಾಟಕದ ಇತಿಹಾಸದಲ್ಲೇ ೭೫ ಕೋಟಿ ರೂ.ಗಳ ಬೃಹತ್ ಪ್ರಮಾಣದ ಮಾದಕ ದ್ರವ್ಯವನ್ನು ಪತ್ತೆಹಚ್ಚಿ, ಇಬ್ಬರು ವಿದೇಶಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿರುವ ಮಂಗಳೂರು ನಗರ ಪೊಲೀಸರ ಕಾರ್ಯಾಚರಣೆಯನ್ನು ಸಂಸದ ಬ್ರಿಜೇಶ್ ಚೌಟ ಶ್ಲಾಘಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಬ್ರಿಜೇಶ್ ಚೌಟ ಅವರು, ತಾನು ಸಂಸದನಾದ ಕೂಡಲೇ ಕಳೆದ ವರ್ಷದ ಮೊದಲ ಅಧಿವೇಶನದಲ್ಲೇ ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿ ಅದನ್ನು ಮಟ್ಟ ಹಾಕುವುದಕ್ಕೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದೆ. ಇದೀಗ ಮಂಗಳೂರು ಪೊಲೀಸರು ಭೇದಿಸಿರುವ ಈ ಡ್ರಗ್ಸ್ ಜಾಲ ನೋಡಿ ದರೆ ಗೊತ್ತಾಗುತ್ತದೆ ಅದು ಎಷ್ಟೊಂದು ದೊಡ್ಡ ಮಟ್ಟದಲ್ಲಿ ವ್ಯಾಪಿಸಿಕೊಂಡಿದೆ ಎನ್ನುವುದು. ಈ ವಿದೇಶಿ ಡ್ರಗ್ಸ್ ಮಾಫಿಯಾದ ಬೆನ್ನುಹತ್ತಿದ್ದ ಮಂಗಳೂರು ಪೊಲೀಸರ ತಂಡವು ಇಬ್ಬರು ಕಿಂಗ್‌ಪಿನ್‌ಗಳನ್ನು ಬಂಧಿಸಿರುವುದು ನಿಜಕ್ಕೂ ಗಮನಾರ್ಹ ಪರಿಶ್ರಮ ಹಾಗೂ ಸಾಧನೆಯಾಗಿದೆ. ಈ ಹಿನ್ನಲೆಯಲ್ಲಿ ದೊಡ್ಡ ಪ್ರಮಾಣದ ಡ್ರಗ್ಸ್ ಜಾಲವನ್ನು ಮಟ್ಟ ಹಾಕಿರುವ ಮಂಗಳೂರು ಸಿಸಿಬಿ ಪೊಲೀಸರ ಇಡೀ ತಂಡವನ್ನು ಅಭಿನಂದಿಸುವುದಾಗಿ ಹೇಳಿದ್ದಾರೆ.

ಈ ಪ್ರಕರಣವನ್ನು ನೋಡುವಾಗ ಮಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಈ ಡ್ರಗ್ಸ್ ಮಾಫಿಯಾದ ಹಿಂದೆ ವಿದೇಶಿ ಪೆಡ್ಲರ್‌ಗಳ ದೊಡ್ಡ ಮಟ್ಟದ ಕೈವಾಡವಿರುವುದು ಸ್ಪಷ್ಟ. ಹೀಗಿರುವಾಗ, ಈ ಜಾಲವನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕಾದರೆ ಕೇಂದ್ರ ಗೃಹ ಇಲಾಖೆ ಸೇರಿದಂತೆ ಅಂತಾರಾಷ್ಟ್ರೀಯ ತನಿಖಾ ಏಜೆನ್ಸಿಗಳ ಸಹಕಾರ ಕೂಡ ಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಸಂಸದನ ನೆಲೆಯಲ್ಲಿ, ರಾಜ್ಯ ಸರ್ಕಾರ, ಕೇಂದ್ರ ಗೃಹ ಇಲಾಖೆ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಗಮನಕ್ಕೂ ತಂದು, ಆ ಮೂಲಕ ಸ್ಥಳೀಯ ಡ್ರಗ್ಸ್ ಡೀಲರ್‌ಗಳು ಹಾಗೂ ವಿದೇಶಿ ಕೈವಾಡದ ಬಗ್ಗೆ ಸಮಗ್ರ ತನಿಖೆ ನಡೆಸಿ ಈ ಮಾದಕ ಧಂದೆಯನ್ನು ಬೇರು ಸಮೇತ ಕಿತ್ತೊಗೆಯುವುದಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು. ಅಲ್ಲದೆ, ರಾಜ್ಯ ಸರ್ಕಾರದ ತನಿಖಾ ಏಜೆನ್ಸಿಗಳು ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅದರ ಹಿಂದಿರುವ ದೊಡ್ಡ ಮಟ್ಟದ ಕೈವಾಡದ ಬಗ್ಗೆ ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸಬೇಕೆಂದು  ಚೌಟ ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News