×
Ad

ಮಂಗಳೂರು| ಬ್ಯಾರಿ ಜನಾಂಗ ಸೌಹಾರ್ದತೆಗೆ ಹೆಸರುವಾಸಿ: ಡಿ.ಕೆ.ಶಿವಕುಮಾರ್

Update: 2025-04-20 21:45 IST

ಮಂಗಳೂರು: ಕರಾವಳಿಯ ಬಿಲ್ಲವರು, ಮೊಗವೀರರು, ಜೈನರ ಜೊತೆ ಅನ್ಯೋನ್ಯ ಸಂಬಂಧ ಹೊಂದಿರುವ ಬ್ಯಾರಿ ಜನಾಂಗವು ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಬಪ್ಪ ಬ್ಯಾರಿಯು ಮುಲ್ಕಿಯ ಬಪ್ಪನಾಡಿನಲ್ಲಿ ದೇವಸ್ಥಾನ ಕಟ್ಟಿಸಿರುವುದು ಕೂಡ ಅದಕ್ಕೆ ಬಲವಾದ ಸಾಕ್ಷಿಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಕರ್ನಾಟಕ ಬ್ಯಾರೀಸ್ ಸೋಶಿಯಲ್ ಮತ್ತು ಕಲ್ಚರಲ್ ಫೋರಂ ವತಿಯಿಂದ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ರವಿವಾರ ನಡೆದ ಬ್ಯಾರೀಸ್ ಫೆಸ್ಟಿವಲ್-ಬ್ಯಾರಿ ಬಹುಭಾಷಾ ಸೌಹಾರ್ದ ಉತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.


ಬ್ಯಾರಿಗಳು ತಮ್ಮದೇ ಆದ ಮಾತೃಭಾಷೆ ಹೊಂದಿದ್ದರೂ ಕೂಡ ಕನ್ನಡವನ್ನೂ ಸ್ಪಷ್ಟವಾಗಿ ಮಾತನಾಡುತ್ತಿ ರುವುದು ಬ್ಯಾರಿಗಳ ವೈಶಿಷ್ಟ್ಯವಾಗಿದೆ. ಸಮಸ್ಯೆಗಳಿಗೆ ಸಕಾಲಿಕವಾಗಿ ಸ್ಪಂದಿಸುವುದು ಕೂಡ ಬ್ಯಾರಿಗಳ ಗುಣವಾಗಿದೆ. ಎರಡು ದಿನಗಳ ಕಾಲ ನಡೆದ ಈ ಫೆಸ್ಟಿವಲ್‌ನಲ್ಲಿ ಎಲ್ಲಾ ಜಾತಿ, ಭಾಷೆ, ಧರ್ಮದ ಜನರನ್ನು ಸೇರಿಸಿ ಉದ್ಯೋಗ ಮೇಳ, ಶೈಕ್ಷಣಿಕ ಮೇಳ, ವೈದ್ಯಕೀಯ ಶಿಬಿರ ಆಯೋಜಿಸಿರುವುದು ಅಭಿನಂದನೀಯ. ಕಲುಷಿತಗೊಂಡಿರುವ ಈ ಕಾಲಘಟ್ಟದಲ್ಲಿ ಬ್ಯಾರಿ ಫೆಸ್ಟಿವಲ್ ಮೂಲಕ ಸೌಹಾರ್ದದ ವಾತಾವರಣ ಮೂಡಿಸುವ ಪ್ರಯತ್ನ ಕೂಡ ಶ್ಲಾಘನೀಯ. ಇಂತಹ ಉತ್ಸವವನ್ನು ವರ್ಷಂಪ್ರತಿ ಆಯೋಜಿಸಬೇಕು ಎಂದು ಡಿ.ಕೆ. ಶಿವಕುಮಾರ್ ಸಲಹೆ ನೀಡಿದರು.

ನ್ಯಾಷನಲ್ ಅಲೈಡ್ ಆ್ಯಂಡ್ ಹೆಲ್ತ್ ಕೌನ್ಸಿಲ್‌ನ ರಾಜ್ಯ ಅಧ್ಯಕ್ಷ ಯು.ಟಿ. ಇಫ್ತಿಕಾರ್ ಅಲಿ, ನಸೀಮಾ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ಯು.ಟಿ. ಝುಲ್ಫಿಕರ್ ಅಲಿ, ಉದ್ಯಮಿಗಳಾದ ಮುಸ್ತಫಾ ಭಾರತ್, ಝಕರಿಯಾ ಜೋಕಟ್ಟೆ, ರೋಹನ್ ಮೊಂತೆರೋ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಇನಾಯತ್ ಅಲಿ, ಮಿಥುನ್ ರೈ, ರಕ್ಷಿತ್ ಶಿವರಾಂ, ರಾಜ್ಯ ಮಹಿಳಾ ಮತ್ತು ಮಕ್ಕಳ ಆಯೋಗದ ಸದಸ್ಯೆ ಕೃಪಾ ಅಮರ್ ಆಳ್ವ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ರಾಜೇಂದ್ರ ಕುಮಾರ್, ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ವಕ್ತಾರ ಟಿ.ಎಂ.ಶಹೀದ್, ಕರ್ನಾಟಕ ಬ್ಯಾರೀಸ್ ಸೋಶಿಯಲ್ ಮತ್ತು ಕಲ್ಚರಲ್ ಫೋರಂ ಅಧ್ಯಕ್ಷ ಇಕ್ಬಾಲ್ ಪರ್ಲಿಯಾ, ಸಂಘಟಕ ಹೈದರ್ ಪರ್ತಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.


ಉತ್ಸವ ಸಮಿತಿಯ ಅಧ್ಯಕ್ಷ, ನಿವೃತ್ತ ಪೊಲೀಸ್ ಉಪಾಯುಕ್ತ ಜಿ.ಎ.ಬಾವ ಸ್ವಾಗತಿಸಿದರು. ಗಾಯಕ ಇಕ್ಬಾಲ್ ಕಾಟಿಪಳ್ಳ ಬ್ಯಾರಿ ಸ್ತುತಿಗೀತೆ ಹಾಡಿದರು. ಸಂಘಟಕಿ ಯು.ಟಿ.ಫರ್ಝಾನ ಮತ್ತು ಸಾಹಿಲ್ ಝಹೀರ್ ಕಾರ್ಯಕ್ರಮ ನಿರೂಪಿಸಿದರು.













Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News