ಕೊಂಕಣಿ ಕಲಿಕೆಗೆ ಪೋಷಕರ ನಿರಾಸಕ್ತಿ: ಸ್ಟ್ಯಾನಿ ಅಲ್ವಾರಿಸ್
ಮಂಗಳೂರು: ಕೊಂಕಣಿ ಸಾಹಿತ್ಯ ಅಕಾಡೆಮಿಯ ನೇತೃತ್ವದಲ್ಲಿ ಈ ಹಿಂದೆ ದ.ಕ. ಜಿಲ್ಲೆಯಲ್ಲಿ 6ರಿಂದ 10ನೇ ತರಗತಿವರೆಗೆ ಐಚ್ಛಿಕ ವಿಷಯವಾಗಿ ಕೊಂಕಣಿ ಭಾಷಾ ಕಲಿಕೆಯನ್ನು ಆರಂಭಿಸಲಾಗಿದ್ದು, ಈಗ ಮಕ್ಕಳ ಕೊರತೆಯಿಂದ ಸ್ಥಗಿತಗೊಂಡಿದೆ. ಅಕಾಡೆಮಿಯಿಂದ ಎಷ್ಟು ಪ್ರಯತ್ನಪಟ್ಟರೂ ಕೊಂಕಣಿ ಕಲಿಕೆಗೆ ಮಕ್ಕಳ ಪೋಷಕರು ಆಸಕ್ತಿ ತೋರಿಸುತ್ತಿಲ್ಲ ಎಂದು ಸ್ಟ್ಯಾನಿ ಆಲ್ವಾರಿಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಪದವಿ ತರಗತಿಗಳಲ್ಲಿ ಮಾತ್ರವೇ ಕೊಂಕಣಿ ಕಲಿಸಲಾಗುತ್ತಿದೆ ಎಂದರು.
ಕೃತಿ ಪ್ರಕಟಿಸಲು ಮಾನದಂಡ
ಈ ಹಿಂದೆ ಅಕಾಡೆಮಿಯಿಂದ ಬಹಳಷ್ಟು ಪುಸ್ತಕಗಳು ಪ್ರಕಟವಾಗಿ ರಾಶಿಬಿದ್ದಿವೆ. ಅವುಗಳನ್ನೀಗ ಶೇ.50 ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದು, ಈಗಾಗಲೇ 1 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಪುಸ್ತಕ ಗಳ ಮಾರಾಟ ನಡೆದಿದೆ. ಈವರೆಗೆ ಅಕಾಡೆಮಿಯಿಂದ ಕೃತಿ ಪ್ರಕಟಿಸಲು ಯಾವುದೇ ಮಾನ ದಂಡ ಇರಲಿಲ್ಲ. ಇದೀಗ ಮೌಲ್ಯಯುತವಾದ ಕೃತಿಗಳನ್ನು ಹೊರತರುವ ಉದ್ದೇಶದಿಂದ ಕೃತಿಗಳು ಪ್ರಕಟಣೆಗೆ ಯೋಗ್ಯವೋ, ಅಲ್ಲವೋ ಎಂಬುದನ್ನು ತೀರ್ಮಾನಿಸಲು ಸಮಿತಿ ರಚನೆ ಮಾಡಲಾಗಿದೆ. ಪ್ರಸ್ತುತ ಐದಾರು ಪುಸ್ತಕಗಳು ಸಮಿತಿ ಮುಂದೆ ಪರಿಶೀಲನೆಯಲ್ಲಿವೆ ಎಂದರು.
ಕೊಂಕಣಿ ಕತೆ, ಕವಿತೆ ಅನುವಾದ
ಕೊಂಕಣಿಯ 100 ಆಯ್ದ ಕವಿತೆಗಳು, 50 ಸಣ್ಣ ಕತೆಗಳನ್ನು ಕನ್ನಡಕ್ಕೆ ಅನುವಾದಿಸುವ ಕೆಲಸ ನಡೆಯುತ್ತಿದೆ. ಅಕಾಡೆಮಿ ವತಿಯಿಂದ ಕೊಂಕಣಿ ಕಾದಂಬರಿ, ಕೊಂಕಣಿ ಕಿರು ನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಮುಂದಿನ 2 ವರ್ಷದೊಳಗೆ ದೇಶದ ಪ್ರಮುಖ ಮಹಾನ್ ವ್ಯಕ್ತಿಗಳ ಕುರಿತಾದ ಕೊಂಕಣಿ ಕೃತಿಗಳನ್ನು ಹೊರತರಲು ಉದ್ದೇಶಿಸಲಾಗಿದೆ. ಈಗಾಗಲೇ ಮಹಾತ್ಮಾ ಗಾಂಧೀಜಿ ಕುರಿತಾದ ಗಾಂಧಿ ಸ್ಮತಿ ಕೊಂಕಣಿ ಕೃತಿಯನ್ನು ಅಕಾಡೆಮಿ ವತಿಯಿಂದ ಪ್ರಕಟಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಕುರಿತ ಕೃತಿ ಹೊರಬರಲಿದೆ. ಮುಂದಿನ ದಿನಗಳಲ್ಲಿ ಪ್ರಮುಖ ಮಹಾನ್ ವ್ಯಕ್ತಿಗಳ ಕೃತಿಗಳನ್ನು ಕೊಂಕಣಿಯಲ್ಲಿ ಹೊರತರಲಿದ್ದೇವೆ ಎಂದು ಹೇಳಿದರು.