ರಾಜಕೀಯ ದುರುದ್ದೇಶಕ್ಕಾಗಿ ಕಾಂಗ್ರೆಸ್‌ನಿಂದ ಪೊಲೀಸ್ ಇಲಾಖೆಯ ದುರ್ಬಳಕೆ: ಸತೀಶ್ ಕುಂಪಲ ಆರೋಪ
ಸತೀಶ್ ಕುಂಪಲ
ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ನಿರಂತರವಾಗಿ ಸಂಘ ಪರಿವಾರದ ಕಾರ್ಯ ಕರ್ತರ ಮೇಲೆ ಸುಳ್ಳು ಕೇಸುಗಳನ್ನು ಹಾಕುವುದರ ಮೂಲಕ ಮಾನಸಿಕವಾಗಿ ಕುಗ್ಗಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದರು.
ದೇಶದ ಪರವಾಗಿ, ಹಿಂದುತ್ವದ ಕಾರ್ಯನಡೆಸುತ್ತಿರುವ ಕಾರ್ಯಕರ್ತರನ್ನು ಕಂಡಾಗ ಕಣ್ಣು ಕೆಂಪಾಗುವ ಸಿದ್ದರಾಮಯ್ಯ ದೇಶದ್ರೋಹಿ ಕಿಡಿಗೇಡಿಗಳ ಬಗ್ಗೆ ಮೃದುತ್ವ ಪ್ರದರ್ಶಿಸಿ ಬಣ್ಣ ಬದಲಾಯಿಸುತ್ತಾರೆ. ಈ ಮೂಲಕ ರಾಜ್ಯದಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ಸರಕಾರ ಆಡಳಿತ ನಡೆಸುತ್ತಿದೆ. ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದೆ ಎಂದರು.
ಕುಡುಪು ಪರಿಸರದ ಘಟನೆಯನ್ನು ಕಾಂಗ್ರೆಸ್ ರಾಜಕೀಯ ದುರುದ್ದೇಶಕ್ಕಾಗಿ ಬಳಸುತ್ತಿದೆ. ಪೊಲೀಸ್ ಇಲಾಖೆಯನ್ನು ಕೈಗೊಂಬೆ ಯಾಗಿಸುತ್ತಿದೆ. ಇದನ್ನು ಬಿಜೆಪಿಗೆ ಸಹಿಸಲು ಸಾಧ್ಯವಿಲ್ಲ. ಪ್ರಕರಣಕ್ಕೆ ಸಂಬಂಧಿ ಸಿದಂತೆ ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಸತೀಶ್ ಕುಂಪಲ ಆಗ್ರಹಿಸಿದ್ದಾರೆ.