×
Ad

ತಂದೆಯನ್ನು ನೆನೆದು ಭಾವುಕರಾದ ಸ್ಪೀಕರ್ ಯು.ಟಿ ಖಾದರ್ ಫರೀದ್

Update: 2025-05-19 19:30 IST

ಮಂಗಳೂರು, ಮೇ 19: ಪವಿತ್ರ ಹಜ್ ಯಾತ್ರೆಗೆ ಹೊರಡಲಿರುವ ಸ್ಪೀಕರ್ ಯು.ಟಿ.ಖಾದರ್ ಅವರನ್ನು ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ವತಿಯಿಂದ ಸೋಮವಾರ ನಗರದ ಖಾಸಗಿ ಹೊಟೇಲಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೀಳ್ಕೊಡಲಾಯಿತು.

ಈ ಸಂದರ್ಭ ಸ್ಪೀಕರ್ ಯು.ಟಿ.ಖಾದರ್ ತನ್ನ ತಂದೆ ಮಾಜಿ ಶಾಸಕ ಯು.ಟಿ.ಫರೀದ್ ಅವರನ್ನು ನೆನೆದು ಭಾವುಕರಾದರು.


ಉಳ್ಳಾಲದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದರೂ ಕೂಡ ಅವರೆಂದೂ ಕೂಡ ಹೊರ ರಾಜ್ಯ, ವಿದೇಶವನ್ನು ಸುತ್ತಾಡಿದವರಲ್ಲ. ಕ್ಷೇತ್ರದ ಜನತೆಗಾಗಿ ಹೆಚ್ಚಿನ ಸಮಯ ಮೀಸಲಿಟ್ಟಿದ್ದರು. ಪವಿತ್ರ ಹಜ್ ಯಾತ್ರೆ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರೂ ಕೂಡ ಕೊನೆಯ ಘಳಿಗೆಯಲ್ಲಿ ಅವರಿಗೆ ಆರೋಗ್ಯ ಸಮಸ್ಯೆ ಕಾಡಿದ ಕಾರಣ ಅದೂ ಈಡೇರಲಿಲ್ಲ ಎಂದು ಯು.ಟಿ.ಖಾದರ್ ಹೇಳಿದರು.

ನಾನು ಯಾವ ಸ್ಥಾನಮಾನವನ್ನೂ ಆಶಿಸಿದವನಲ್ಲ. ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು, ಮಂತ್ರಿಯಾಗಲು ಯಾರದೇ ಶಿಫಾರಸು ಮಾಡಿಸಿದವನಲ್ಲ. ನಿಮ್ಮೆಲ್ಲರ ದುಆ, ಆಶೀರ್ವಾದವೇ ನನ್ನನ್ನು ಈ ಹಂತಕ್ಕೆ ತಲುಪಿಸಿದೆ. ನನ್ನ ಈವರೆಗಿನ ಬದುಕು ನೆಮ್ಮದಿಯಿಂದ ಕೂಡಿದೆ. ಹಜ್ ಯಾತ್ರೆಯ ಪವಿತ್ರವಾದುದು. ಅದು ಎಲ್ಲರಿಗೂ ದಕ್ಕುವಂತದ್ದಲ್ಲ. ಹಣವಿದ್ದೂ ಹಜ್ ಯಾತ್ರೆ ಮಾಡಲಾಗದವರು ಇದ್ದಾರೆ. ಹಣವಿಲ್ಲದವರಿಗೆ ಕೂಡ ಈ ಸೌಭಾಗ್ಯ ದಕ್ಕಿದೆ. ನಾನು ಹಜ್ ಯಾತ್ರೆ ಮಾಡಲು ಯಾವುದೇ ಪೂರ್ವ ಸಿದ್ಧತೆ ಮಾಡಿದವನಲ್ಲ. ಅನಿರೀಕ್ಷಿತವಾಗಿ ತನಗೆ ಮತ್ತು ತನ್ನ ಸಹೋದರ ಇಫ್ತಿಕಾರ್ ಹಾಗೂ ಕುಟುಂಬದ ಸದಸ್ಯರಿಗೆ ಈ ಅವಕಾಶ ಲಭಿಸಿದೆ. ಇದು ಅಲ್ಲಾಹನ ಅನುಗ್ರಹವಾಗಿದೆ. ನನಗಾಗಿ ನೀವು ಪ್ರಾರ್ಥಿಸಬೇಕು. ನಿಮ್ಮ ದುಆ, ನಮ್ಮ ರಕ್ಷಣೆಯಾಗಿದೆ. ನಾಡಿನ, ಸಮುದಾಯದ ಹಿತಕ್ಕಾಗಿ ನಾನು ಅಲ್ಲಿ ಪ್ರಾರ್ಥಿಸುವೆ. ಈ ಸಾರ್ವಜನಿಕ ರಂಗದಲ್ಲಿ, ನಿಮ್ಮೊಂದಿಗಿನ ನನ್ನ ಒಡನಾಟದಲ್ಲಿ ಏನಾದರು ತಪ್ಪಾಗಿದ್ದರೆ, ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿರಿ ಎಂದು ಯು.ಟಿ.ಖಾದರ್ ನುಡಿದರು.


ಈ ಸಂದರ್ಭ ಹಜ್ ಯಾತ್ರೆಗೈಯಲಿರುವ ದಿ ನ್ಯಾಷನಲ್ ಕಮಿಷನ್ ಫಾರ್ ಅಲ್ಲೈಡ್ ಆ್ಯಂಡ್ ಹೆಲ್ತ್‌ಕೇರ್ ಕರ್ನಾಟಕ ರಾಜ್ಯಾಧ್ಯಕ್ಷ ಯು.ಟಿ. ಇಫ್ತಿಕಾರ್ ಅಲಿ ಅವರನ್ನು ಕೂಡ ಬೀಳ್ಗೊಡಲಾಯಿತು. ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾಕೂಬ್ ಸಅದಿ ನಾವೂರು ದುಆಗೈದರು. ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.


ಯೆನೆಪೊಯ ವಿವಿಯ ಕುಲಾಧಿಪತಿ ಡಾ.ವೈ.ಅಬ್ದುಲ್ಲಾ ಕುಂಞಿ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ದ.ಕ.ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಮುಹಮ್ಮದ್ ಶುಭ ಹಾರೈಸಿದರು.

ವೇದಿಕೆಯಲ್ಲಿ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್, ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಸ್ತಫಾ ಸುಳ್ಯ, ಉಳ್ಳಾಲ ದರ್ಗಾದ ಅಧ್ಯಕ್ಷ ಬಿ.ಜಿ. ಹನೀಫ್ ಹಾಜಿ, ಅಬೂಬಕರ್ ಮತ್ತಿತರರು ಉಪಸ್ಥಿತರಿದ್ದರು. ಸೈದುದ್ದೀನ್ ಬಜ್ಪೆ ಕಾರ್ಯಕ್ರಮ ನಿರೂಪಿಸಿದರು.


















Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News