×
Ad

ದ.ಕ. ಜಿಲ್ಲೆಯಲ್ಲಿ ಕಡಿಮೆಯಾದ ಮಳೆ, ಕಾಣಿಸಿಕೊಂಡ ಬಿಸಿಲು

Update: 2025-06-01 20:27 IST

ಮಂಗಳೂರು, ಜೂ.1: ದಕ್ಷಿಣ ಕನ್ನಡದಲ್ಲಿ ಮುಂಗಾರು ಆರಂಭಕ್ಕೂ ಮುನ್ನವೆ ಉಗ್ರ ಪ್ರತಾಪ ತೋರಿದ ಮಳೆಯ ಅಬ್ಬರ ಇದೀಗ ಕ್ಷೀಣಿಸಿದೆ. ಎರಡು ದಿನಗಳಿಂದ ಕಡಿಮೆಯಾಗಿದ್ದು, ಇಂದು ಸಂಜೆಯ ವರೆಗೆ ಆಗಾಗ ಮೋಡ ಕವಿದ ವಾತಾವರಣದ ನಡುವೆ ಬಿಸಿಲು ಕಾಣಿಸಿಕೊಂಡಿತ್ತು.

ಮಳೆಯ ಕಡಿಮೆಯಾದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ತುಂಬಿ ಹರಿಯುತ್ತಿದ್ದ ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಯಾವುದೇ ಆಲರ್ಟ್‌ನ್ನು ಹವಾಮಾನ ಇಲಾಖೆ ಘೋಷಿಸಿಲ್ಲ. ಈ ಕಾರಣ ದಿಂದಾಗಿ ಇದೇ ವಾತಾವರಣ ಕೆಲವು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ.

ಶನಿವಾರ ದಿನವಿಡೀ ಮಳೆ ಇರಲಿಲ್ಲ. ಮಧ್ಯ ರಾತ್ರಿ ಹೊತ್ತಿಗೆ ಮಳೆ ಕಾಣಿಸಿಕೊಂಡಿತ್ತು. ಇಂದು ಹಗಲಿನಲ್ಲಿ ಬಿಸಿಲು ಇತ್ತು. ಮಳೆ, ಪ್ರಾಕೃತಿಕ ವಿಕೋಪದಿಂದಾಗಿ ಈ ವರೆಗೆ ಆಗಿರುವ ಅನಾಹುತದಿಂದಾಗಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿದೆ.

ಮಳೆಯಿಂದಾಗಿ ಅಲ್ಲಲ್ಲಿ ಮನೆಗಳ ಬಳಿಯ ಗುಡ್ಡ ಜರಿದು,ಆವರಣ ಗೋಡೆಗಳು ಕುಸಿದು, ಮರಗಳು ಉರುಳಿ ಬಿದ್ದು ಅನಾಹುತ ಉಂಟಾಗಿತ್ತು. ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ.

ಸಂಪರ್ಕ ಕಡೆ ವಿದ್ಯುತ್ ಕಂಬಗಳು ಮುರಿದು ಬಿದ್ದು ಸಂಪರ್ಕ ಕಡಿದು ಹೋಗಿರುವುದನ್ನು ಮೆಸ್ಕಾಂನಿಂದ ಸರಿಪಡಿಸಲಾಗುತ್ತಿದೆ. ಜೂ.1ರಂದು ಬೆಳಗ್ಗೆ 8:30ರ ವರೆಗಿನ 24 ಗಂಟೆಗಳ ಅವಧಿಯಲ್ಲಿ ದ.ಕ. ಜಿಲ್ಲೆ ಯಲ್ಲಿ ಸರಾಸರಿ 8.5 ಮೀ ಮಳೆಯಾಗಿದೆ. (ವಾಡಿಕೆ ಮಳೆ ಸರಾಸರಿ 10.7 ಮಿ.ಮೀ) ಬೆಳ್ತಂಗಡಿ 4.5 ಮಿ.ಮೀ, ಬಂಟ್ವಾಳ 14.5 ಮಿ.ಮೀ, ಮಂಗಳೂರು 15.1 ಮಿ.ಮೀ, ಪುತ್ತೂರು 21.6 ಮಿ.ಮೀ, ಸುಳ್ಯ 4.6 ಮಿ.ಮೀ, ಮೂಡಬಿದ್ರೆ 10.9 ಮಿ.ಮೀ, ಕಡಬ 3.2 ಮಿ.ಮೀ, ಮೂಲ್ಕಿ 11.3 ಮಿ.ಮೀ, ಉಳ್ಳಾಲ 3.2 ಮಿ.ಮೀ ಮಳೆಯಾಗಿದೆ.

ಕಳೆದ ಜನವರಿಯಿಂದ ಜೂನ್ 1ರ ತನಕ 1,101.6 ಮಿ.ಮೀ ಮಳೆಯಾಗಿದೆ. ವಾಡಿಕೆ ಮಳೆ 253.2 ಮಿ.ಮೀ. 

ಕಳೆದ 24 ಗಂಟೆಗಳ ಅವಧಿಯಲ್ಲಿ ಮಳೆಯಿಂದಾಗಿ ಯಾವುದೇ ಜೀವ ಹಾನಿ ಸಂಭವಿಸಿರುವ ಘಟನೆ ವರದಿಯಾಗಿಲ್ಲ. ಎರಡು ದಿನಗಳ ಮೊದಲು ಸಂಭವಿಸಿದ್ದ ಅನಾಹುತದಿಂದಾಗಿ ಒಟ್ಟು 5 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇಬ್ಬರು ಗಾಯಗೊಂಡಿದ್ದರು. ಇದೇ ವೇಳೆ 47 ಮನೆಗಳು ಸಂಪೂರ್ಣವಾಗಿ ಹಾನಿ ಯಾಗಿದ್ದವು, 321 ಮನೆಗಳಿಗೆ ಭಾಗಶ: ಹಾನಿಯಾಗಿದೆ. ಈ ಅವಧಿಯಲ್ಲಿ ಮೆಸ್ಕಾಂನ 3,591 ಕಂಬಗಳು, 82 ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೊಂಡಿವೆ.

ಮಳೆಯಿಂದಾಗಿ ನದಿಯಲ್ಲಿ ಏರಿಕೆಯಾಗಿದ್ದ ನೀರಿನ ಪ್ರಮಾಣ ಕಡಿಮೆಯಾಗಿದೆ. ನೇತ್ರಾವತಿ ನದಿ ನೀರಿನ ಮಟ್ಟ ಉಪ್ಪಿನಂಗಡಿಯಲ್ಲಿ 3.9 ಮೀಟರ್ ಮತ್ತು ಉಪ್ಪಿನಂಗಡಿಯಲ್ಲಿ 24.20 ಮೀ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News