×
Ad

ಉಪ್ಪಿನಂಗಡಿ| ಕುಡಿಯುವ ನೀರಿನ ಟ್ಯಾಂಕ್‍ ತಳಭಾಗದಲ್ಲಿ ರಾಶಿಗಟ್ಟಲೆ ಕಸ ಪತ್ತೆ; ಸ್ಥಳೀಯರ ಆಕ್ರೋಶ

Update: 2025-06-02 21:35 IST

ಉಪ್ಪಿನಂಗಡಿ: ಇಲ್ಲಿನ ನಟ್ಟಿಬೈಲ್‍ನಲ್ಲಿರುವ ಗ್ರಾ.ಪಂ.ನ ಕುಡಿಯುವ ನೀರಿನ ಟ್ಯಾಂಕ್‍ನ ತಳಭಾಗದಲ್ಲಿ ರಟ್ಟಿನ ಬಾಕ್ಸ್, ಕಬ್ಬಿಣದ ರಾಡ್, ಗುಟ್ಕಾ ಪ್ಯಾಕೇಟ್‍ಗಳು ಸೇರಿದಂತೆ ರಾಶಿಗಟ್ಟಲೆ ಕಸವಿರುವುದು ಪತ್ತೆಯಾಗಿದ್ದು, ಕಳೆದ ಒಂದು ವರ್ಷದಿಂದ ಇದೇ ಟ್ಯಾಂಕ್‍ನ ನೀರು ಕುಡಿಯುತ್ತಿರುವ ನಟ್ಟಿಬೈಲ್ ಪರಿಸರದ ನಿವಾಸಿಗಳು ಅಧಿಕಾರಿಗಳ ಬೇಜಾವಬ್ದಾರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಜಲ ಜೀವನ್ ಮೆಷಿನ್ ಯೋಜನೆಯಡಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ನಟ್ಟಿಬೈಲ್‍ನಲ್ಲಿ ಕುಡಿಯುವ ನೀರಿನ ಟ್ಯಾಂಕ್‍ವೊಂದನ್ನು ನಿರ್ಮಿಸಿತ್ತು. ಇದರ ಕಾಮಗಾರಿ ಮುಗಿದ ಬಳಿಕ ಅಂದರೆ ಸುಮಾರು ಒಂದು ವರ್ಷಗಳ ಹಿಂದೆ ಇದನ್ನು ಗ್ರಾ.ಪಂ.ಗೆ ಹಸ್ತಾಂತರ ಮಾಡಿತ್ತು. ಈ ಕಾಮಗಾರಿಯ ಸಂದರ್ಭ ರಟ್ಟಿನ ಬಾಕ್ಸ್‍ಗಳು, ಕಬ್ಬಿಣದ ರಾಡ್‍ಗಳು, ಗುಟ್ಕಾ ಪ್ಯಾಕೇಟ್‍ಗಳು, ಕಾರ್ಡ್ ಬೋರ್ಡ್‍ಗಳು, ಪ್ಲಾಸ್ಟಿಕ್‍ಗಳು ಸೇರಿದಂತೆ ಇನ್ನಿತರ ಕಸಕಡ್ಡಿಗಳು ಟ್ಯಾಂಕ್‍ನೊಳಗಡೆನೇ ಬಾಕಿಯಾಗಿದ್ದು, ಇದನ್ನು ಯಾರೂ ಗಮನಿಸಿರಲಿಲ್ಲ. ಗ್ರಾ.ಪಂ.ನವರು ಇದಕ್ಕೆ ನೀರು ತುಂಬಿಸಿ ನಟ್ಟಿಬೈಲ್ ಪರಿಸರದ ನಿವಾಸಿಗಳ ಮನೆಗಳಿಗೆ ಸರಬರಾಜು ಮಾಡಲು ಆರಂಭಿಸಿತು. ಸುಮಾರು ಒಂದು ವರ್ಷದಿಂದ ಈ ಪರಿಸರದ ನಾಗರಿಕರು ಇದೇ ನೀರನ್ನು ಕುಡಿಯುತ್ತಿದ್ದರು. ಆದರೆ ಏಕಾಏಕಿ ಟ್ಯಾಂಕ್‍ನಿಂದ ಪೈಪ್‍ಗಳಿಗೆ ನೀರು ಸರಬರಾಜು ಆಗುವುದು ನಿಂತಿತ್ತು. ಜೂ.1ರಂದು ಗ್ರಾ.ಪಂ. ಸಿಬ್ಬಂದಿಯು ಇದನ್ನು ಪರೀಕ್ಷಿಸಲು ಬಂದಿದ್ದು, ಟ್ಯಾಂಕ್‍ನ ನೀರು ಖಾಲಿ ಮಾಡಿ ಒಳಗಿಳಿದು ನೋಡಿದಾಗ ಅಲ್ಲಿ ಕಸದ ರಾಶಿಯೇ ಪತ್ತೆಯಾಗಿದೆ.

ಅಧಿಕಾರಿಗಳ ಬೇಜಾವಬ್ದಾರಿ: ದಿನಾಂಕ: 7.08.2023ರಂದು ದಕ್ಷಿಣ ಕನ್ನಡ ಜಿ.ಪಂ.ನ ಕಾರ್ಯ ನಿರ್ವಹಣಾಧಿಕಾರಿಯವರು ಜಲಜೀವನ್ ಮೆಷಿನ್ ಕಾಮಗಾರಿಯ ಅನುಷ್ಠಾನದ ಕುರಿತು ಗ್ರಾ.ಪಂ. ಕುಡಿ ಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಸುತ್ತೋಲೆಯನ್ನು ಹೊರಡಿಸಿದ್ದು, ಅದರಲ್ಲಿ ಕುಡಿಯುವ ನೀರಿನ ಟ್ಯಾಂಕ್‍ಗಳನ್ನು (ಒಎಚ್‍ಟಿ ಹಾಗೂ ಜಿಎಲ್‍ಎಸ್‍ಆರ್)ಗಳನ್ನು ಮೂರು ತಿಂಗಳಿಗೊಮ್ಮೆ ಶುಚಿಗೊಳಿಸಲು ಸೂಚಿಸಿದ್ದಾರೆ. ಕುಡಿಯುವ ನೀರಿನ ಗುಣಮಟ್ಟದ ಕುರಿತು ಆರೋಪಗಳು ಬಂದಲ್ಲಿ ನೇರವಾಗಿ ಸಂಬಂಧಪಟ್ಟ ಪಿಡಿಒ ಅವರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇಲ್ಲಿ ಕಾಮಗಾರಿಯನ್ನು ಗ್ರಾ.ಪಂ.ಗೆ ಬಿಟ್ಟುಕೊಡುವಾಗ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಇದನ್ನು ಪರೀಕ್ಷಿಸಿಲ್ಲ. ಇದು ಕಾಮಗಾರಿ ಸಂದರ್ಭ ಬಾಕಿ ಉಳಿದ ಕಸಗಳಾಗಿವೆ. ಗ್ರಾ.ಪಂ.ನವರು ಕೂಡಾ ಟ್ಯಾಂಕ್ ಅನ್ನು ಪರಿಶೀಲಿಸದೇ ನೇರವಾಗಿ ಇದಕ್ಕೆ ನೀರು ತುಂಬಿ ಗ್ರಾಹಕರಿಗೆ ಸರಬರಾಜು ಮಾಡಿದ್ದಾರೆ. ಆದ್ದರಿಂದ ಇಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್‍ರವರ ಹಾಗೂ ಗ್ರಾ.ಪಂ. ಅಧಿಕಾರಿಗಳ ಬೇಜಾವಬ್ದಾರಿ ಎದ್ದು ಕಾಣುತ್ತಿದ್ದು, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಗ್ರಾ.ಪಂ. ಸದಸ್ಯ ಧನಂಜಯ ನಟ್ಟಿಬೈಲು, ಜಿ.ಪಂ. ಎಂಜಿನಿಯರ್ ಸಂದೀಪ್, ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News