×
Ad

ನಾನು ಯಾವುದೇ ವ್ಯಾಪಾರ ಇಲ್ಲದ ವ್ಯಕ್ತಿ: ರಮಾನಾಥ ರೈ

Update: 2025-06-04 17:37 IST

ಮಂಗಳೂರು, ಜೂ.4: ನನಗೆ ಹೊಯ್ಗೆ, ಕಲ್ಲು, ಮಣ್ಣು ವ್ಯಾಪಾರ ಇಲ್ಲ . ನಾನು ಯಾವುದೇ ವ್ಯಾಪಾರ ಇಲ್ಲದ ವ್ಯಕ್ತಿ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಬಕಾರಿ ಸಚಿವನಾಗಿದ್ದರೂ ಒಂದು ವೈನ್ ಶಾಪ್ ಮಾಡಿಲ್ಲ, ಸಾರಿಗೆ ಮಂತ್ರಿ ಅಗಿ ಸೇವೆ ಸಲ್ಲಿಸಿದ್ದರೂ ಒಂದು ಬಸ್ ಕೂಡಾ ನನ್ನಲ್ಲಿ ಇಲ್ಲ ಎಂದು ಹೇಳಿದರು.

ಕೋಮು ಕ್ರಿಮಿನಲ್‌ಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮವನ್ನು ನಿರೀಕ್ಷಿಸುವ ಕಾಂಗ್ರೆಸ್ ನಾಯಕರು ಮರಳು ದಂಧೆಗೆ ಕಡಿವಾಣ ಹಾಕುವ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಾರೆ ಎಂಬ ಆರೋಪದ ಬಗ್ಗೆ ಗಮನ ಸೆಳೆದಾಗ ಅದು ನನಗೆ ಗೊತ್ತಿಲ್ಲ. ನನ್ನ ಪ್ರಾಮಾಣಿಕತೆಯ ಬಗ್ಗೆ ಪ್ರಶ್ನೆ ಮಾಡಬಹುದು, ನಾನು ಎಲ್ಲ ರೀತಿಯಲ್ಲಿ ಸರಿ ಇದ್ದೇನೆ. ಜಾತ್ಯತೀತ ಸಿದ್ಧಾಂತಕ್ಕೆ ಶಾಶ್ವತವಾಗಿ ಬದ್ಧನಾದ ವ್ಯಕ್ತಿ. ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕು ಎನ್ನುವುದು ನನ್ನ ಆಗ್ರಹವಾಗಿದೆ ಎಂದರು.

ಪೊಲೀಸರ ವರ್ಗಾವಣೆ ಸಹಜ ಪ್ರಕ್ರಿಯೆ ಅದರ ಬಗ್ಗೆ ಪ್ರಶ್ನಿಸುವಂತಿಲ್ಲ. ದ.ಕ. ಜಿಲ್ಲೆಯಲ್ಲಿ ಶಾಂತಿ ನೆಲೆ ಸಲು ಪೊಲೀಸರು ಕಾನೂನಿನಡಿಯಲ್ಲಿ ಕೈಗೊಳ್ಳುವ ಕ್ರಮಗಳನ್ನು ಸ್ವಾಗತಿಸಬೇಕು. ಪೊಲೀಸರಲ್ಲಿ ಎಲ್ಲರೂ ನಂಬಿಕೆ ಇಡಬೇಕು ಎಂದರು.

ಮುಂದೆ ಜಿಲ್ಲೆಯಲ್ಲಿ ಹತ್ಯೆಗೆ ಕಡಿವಾಣ ಹಾಕಬೇಕಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಶಾಶ್ವತವಾಗಿ ಶಾಂತಿ ನೆಲೆಸಲು ಶ್ರಮಿಸಬೇಕಾಗಿದೆ ಎಂದು ಹೇಳಿದರು.

ಶಾಂತಿ ಸಭೆ ಈಗ ಬೇಕು ಎಂದು ಹೇಳುವವರು. ಹಿಂದೆ ಎಷ್ಟು ಶಾಂತಿ ಸಭೆಗೆ ಹೋಗಿದ್ದಾರೆ ? ನಾನು ಹಿಂದೆ ಉಸ್ತುವಾರಿ ಸಚಿವನಾಗಿದ್ದಾಗ ಶಾಂತಿ ಸಭೆ ನಡೆಯುತ್ತಿತ್ತು. ಆದರೆ ಬಿಜೆಪಿ ನಾಯಕರು ಇದಕ್ಕೆ ಬರುತ್ತಿರಲಿಲ್ಲ ಎಂದು ಹೇಳಿದರು.

ಇಲ್ಲಿ ನಡೆದಿರುವ ಮತೀಯ ಗಲಭೆಯಲ್ಲಿ ಕಾಂಗ್ರೆಸ್‌ನಲ್ಲಿರುವ ಹಿಂದುಗಳಾಗಲಿ ಅಥವಾ ಮುಸ್ಲಿಂ ಕಾರ್ಯಕರ್ತ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಶಾಂತಿ ಸಭೆ ನಡೆಯಲಿ. ನಮ್ಮದು ಇದಕ್ಕೆ ಅಭ್ಯಂತರವಿಲ್ಲ. ಇವತ್ತು ಶಾಂತಿ ಸಭೆ ಬೇಕು ಎಂದು ಹೇಳುವ ನಾಯಕರಿಗೆ ನಿಜವಾಗಿಯೂ ಶಾಂತಿ ಸಭೆ ಬೇಕಾಗಿಲ್ಲ. ಅವರು ಅನುಕೂಲಕ್ಕಾಗಿ ಸುಮ್ಮನೆ ಶಾಂತಿ ಸಭೆ ಬೇಕೆಂದು ಹೇಳುತ್ತಾರೆ. ಆದರೆ ಅವರಿಗೆ ಶಾಂತಿ ಬೇಕಾಗಿಲ್ಲ. ಅವರಿಗೆ ಗಲಾಟೆ ಬೇಕು. ಅಮಾಯಕ ಹತ್ಯೆಯಾಗಬೇಕು. ಅವರ ಮಕ್ಕಳು ಇದರಲ್ಲಿ ಸಾಯುವುದಿಲ್ಲ. ಕೋಮು ಪ್ರಚೋದಕ ಭಾಷಣ ಮಾಡಿದ ವರ ಮಕ್ಕಳು ಸಾಯುವುದಿಲ್ಲ. ಜಿಲ್ಲೆಯಲ್ಲಿ ಇಂತವರ ಮಕ್ಕಳು ಸತ್ತಿಲ್ಲ. ಬಡವರ ಮಕ್ಕಳು ಸತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ನಿಲುವಿನ ಬಗ್ಗೆ ಧ್ವನಿ ಎತ್ತಿದ ಅಲ್ಪ ಸಂಖ್ಯಾತ ಘಟಕದ ನಾಯಕರಿಗೆ ಜಿಲ್ಲಾ ಕಾಂಗ್ರೆಸ್‌ನಿಂದ ನೋಟಿಸ್ ಜಾರಿಯಾಗಿರುವ ಬಗ್ಗೆ ಗಮನ ಸೆಳೆದಾಗ ,ಈ ವಿಚಾರದ ಬಗ್ಗೆ ನಾನು ಈಗಾಗಲೇ ಹೇಳಿಕೆ ನೀಡಿದ್ದೆ. ಇವತ್ತು ಯಾರಾದರೂ ಮನಸ್ಸಿಗೆ ನೋವಾದಾಗ ಮಾತನಾಡುತ್ತಾರೆ. ಆದರೆ ಅವರನ್ನು ಕರೆದು ಮಾತನಾಡಬೇಕಾಗಿದೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮನಸ್ಸಿಗೆ ಆಗಿರುವ ನೋವನ್ನು ನಿವಾರಿಸುವ ಮೂಲಕ ಪಕ್ಷದ ಬಲವರ್ಧನೆ ಮಾಡಬೇಕಾಗಿದೆ ಎಂದು ಹೇಳಿದರು.

ಉಸ್ತುವಾರಿ ಸಚಿವರು ಬದಲಾವಣೆ ಆಗುವುದಿಲ್ಲ. ಒಂದು ವೇಳೆ ಬದಲಾವಣೆ ಆದರೆ ಈಗಿನ ಪರಿಸ್ಥಿತಿ ಯಲ್ಲಿ ಹೊರ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಿ ಬರುತ್ತಾರೆ ಎಂದರು.

ಗಡಿಪಾರು ಆದೇಶದಲ್ಲಿ ಪುತ್ತೂರಿನ ಕಾಂಗ್ರೆಸ್ ಧುರೀಣರ ಹೆಸರು ಇದೆ. ಅದು ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದ ಆಗಿದೆ ಎಂದು ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಮಾಜಿ ಬಿ. ರಮಾನಾಥ ರೈ ಅವರು ನನಗೆ ಅದು ಗೊತ್ತಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಶಶೀಧರ ಹೆಗ್ಡೆ, ಪಕ್ಷದ ಧುರೀಣರಾದ ಪ್ರಕಾಶ್ ಸಾಲಿಯಾನ್, ಆರ್‌ಕೆ ಪ್ರಥ್ವಿರಾಜ್, ವಿಶ್ವಾಸ್ ಕುಮಾರ್ ದಾಸ್, ಅಪ್ಪಿ, ನವೀನ್ ಡಿ ಸೋಜ, ಲ್ಯಾನ್ಸ್ ಲೋಟೊ ಪಿಂಟೊ, ಆರೀಫ್ ಬಾವ, ದಿನೇಶ್ ರೈ ಉಳ್ಳಾಲ, ಸುಬೋಧಯ ಆಳ್ವ, ಸಂಶುದ್ದೀನ್ ಬಂದರ್, ಕೇಶವ ಮರೋಳಿ, ನಿತ್ಯಾನಂದ ಶೆಟ್ಟಿ, ಶಬೀರ್ ಸಿದ್ದಕಟ್ಟೆ, ನಝೀರ್ ಬಜಾಲ್ ಸಿದ್ದಕಟ್ಟೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News