×
Ad

ಪೊಲೀಸರಿಂದ ಗೂಂಡಾ ವರ್ತನೆ: ಬಿ.ವೈ. ವಿಜಯೇಂದ್ರ ಆರೋಪ

Update: 2025-06-09 20:55 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ಪೊಲೀಸರು ಗೂಂಡಾ ವರ್ತನೆ ತೋರಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ಅವರು ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಆಯುಕ್ತರನ್ನು ಹಾಗೂ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿದ ಬಳಿಕ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ಅಧಿಕಾರ ತೆಗೆದುಕೊಂಡ ಬಳಿಕ ಬಿಜೆಪಿ, ವಿಎಚ್ ಪಿ, ಬಜರಂಗದಳದ ಕಾರ್ಯಕರ್ತರ ಮನೆಮನೆಗೆ ಪೊಲೀಸರು ಮಧ್ಯರಾತ್ರಿ ಬಾಗಿಲು ತಟ್ಟಿ ಗೂಂಡಾ ರೀತಿಯ ವರ್ತನೆ ತೋರಿಸುತ್ತಿದ್ದಾರೆ. ರಾಜ್ಯ ಸರಕಾರದ ಒತ್ತಡಕ್ಕೆ ಮಣಿದು ಪೊಲೀಸರು ಈ ರೀತಿಯ ವರ್ತನೆ ತೋರಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರ ಈ ಕ್ರಮವನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದೆ ಹೋದರೆ ಪೊಲೀಸರ ವಿರುದ್ಧ ಹೋರಾಟ ನಡೆಸುವುದಾಗಿ ವಿಜಯೇಂದ್ರ ತಿಳಿಸಿದ್ದಾರೆ.

ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ರಾಜ್ಯ ಸರಕಾರ ಎನ್ ಐಎ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹ ಮಾಡಿದರೂ ಕ್ರಮ ಕೈಗೊಳ್ಳದೆ ಇದ್ದಾಗ ನಾವು ರಾಜ್ಯಪಾಲರನ್ನು ಭೇಟಿ ಮಾಡಿ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರ ಸರಕಾರ ಸಮ್ಮತಿಸಿದೆ. ಅದಕ್ಕಾಗಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರ ನಿಲುವನ್ನು ಸ್ವಾಗತಿಸುವುದಾಗಿ ವಿಜಯೇಂದ್ರ ತಿಳಿಸಿದ್ದಾರೆ. ಪೊಲೀಸ್ ಇಲಾಖೆ ಸರಕಾರದ ಕೈ ಗೊಂಬೆಯಂತೆ ವರ್ತಿಸಬಾರದು. ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತಾಗಲಿ ಎಂದರು.

ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಹೊರ ರಾಜ್ಯದವರ, ವಿದೇಶಿ ಕೈವಾಡ ಇದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಎನ್ ಐಎಗೆ ನೀಡಲು ನಾವು ಕೇಂದ್ರ ಸರಕಾರವನ್ನು ಆಗ್ರಹಿಸಿರುವುದಾಗಿ ರಾಜ್ಯ ವಿಧಾನ ಸಭಾ ವಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಪೊಲೀಸರು ಒತ್ತಡಕ್ಕೆ ಮಣಿದು ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ. ನಾವು ಯಾವುದೇ ಸಂದರ್ಭದಲ್ಲಿಯೂ ಪಕ್ಷದ ಕಾರ್ಯಕರ್ತರ ಜೊತೆ ಇರುತ್ತೇವೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಅರವಿಂದ ಬೆಲ್ಲದ, ವಿ.ಸುನೀಲ್ ಕುಮಾರ್, ಎನ್.ರವಿ ಕುಮಾರ್, ಸಿ.ಟಿ‌.ರವಿ, ಸಂಸದ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಹರೀಶ್ ಪೂಂಜ, ರಾಜೇಶ್ ನಾಯ್ಕ್, ಉಮಾನಾಥ ಕೊಟ್ಯಾನ್, ಭಾಗೀರಥಿ ಮುರುಳ್ಯ, ಪ್ರತಾಪ್ ಸಿಂಹ ನಾಯಕ್, ಕಿಶೋರ್ ಕುಮಾರ್, ಸತೀಶ್ ಕುಂಪಲ, ಪ್ರೇಮಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News