ಮಂಗಳೂರು ವಿವಿಯಲ್ಲಿ ಆಹಾರ ಮೇಳ ಉದ್ಘಾಟನೆ: ವಿದೇಶಿ ವಿದ್ಯಾರ್ಥಿಗಳಿಂದಲೂ ಆಹಾರ ಮಳಿಗೆಗಳು
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ , ಟೂರಿಸಂ ವಿಭಾಗದ ವತಿಯಿಂದ ಮಂಗಳ ಸಭಾಂಗಣದ ಬಳಿ ಎರಡು ದಿನಗಳ ಕಾಲ ನಡೆಯಲಿರುವ 'ಇಟೋಪಿಯಾ-2025' ಆಹಾರ ಮೇಳವನ್ನು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಗುರುವಾರ . ಉದ್ಘಾಟಿಸಿದರು.
ಆಹಾರಮೇಳವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಉದ್ಘಾಟಿಸಿ ದರು. ಬಳಿಕ ಮಾತನಾಡಿದ ಅವರು, ವಿಶ್ವವಿದ್ಯಾಲಯದ ಎಂಬಿಎ ಟೂರಿಸಂ ವಿಭಾಗದ ವತಿಯಿಂದ ನಡೆಯುವ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಜೋಡಿಸುವ ಮೂಲಕ ಪ್ರೇಕ್ಷಕರನ್ನು ತಮ್ಮತ್ತಾ ಸೆಳದು ಕೊಳ್ಳಲು ವಿದ್ಯಾರ್ಥಿಗಳು ಉತ್ತಮ ಪ್ರಯೋಗ ಮಾಡಿದ್ದಾರೆ. ಜೊತೆಗೆ ಹೊರ ದೇಶದ ವಿದ್ಯಾರ್ಥಿಗಳು ಭಾಗವಹಿಸಿ ತೊಡಗಿಸಿಕೊಂಡಿರುವುದು ವಿಶೇಷ ಎಂದರು.
ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳಿಂದ ಹೊರಗಡೆಯಿಂದ ಆಹಾರಗಳನ್ನು ತಂದು ವ್ಯಾಪಾರ ಹೇಗೆ ಮಾಡಬೇಕು, ಮತ್ತು ಗ್ರಾಹಕರ ಜೊತೆ ಹೇಗೆ ಮಾತನಾಡಬೇಕು ಮಾಡಿದ ಆಹಾರವನ್ನು ಗ್ರಾಹಕರಿಗೆ ಹೇಗೆ ವಿತರಿಸಬೇಕು ಎಂಬ ಬಗ್ಗೆ ವ್ಯವಹಾರಿಕ ಜ್ಞಾನ ವಿದ್ಯಾರ್ಥಿಗಳಿಗೆ ಸಿಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಂಗಳೂರು ವಿವಿ ಕುಲಸಚಿವರಾದ ಕೆ.ರಾಜು ಮೊಗವೀರ, ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ.ಶೇಖರ್ ನಾಯ್ಕ್, ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕರಾದ ಪ್ರೊ.ಪ್ರಶಾಂತ್ ನಾಯ್ಕ್, ಪ್ರಾಧ್ಯಾಪಕರಾದ ಡಾ.ಜೊಸೆಫ್ ಪಿ.ಡಿ ಮೊದಲಾದವರು ಉಪಸ್ಥಿತರಿದ್ದರು.
ಗಮನ ಸೆಳೆದ ವಿದೇಶಿ ತಿಂಡಿಗಳು: ಆಹಾರ ಮೇಳದಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನ, ಉಜೈಕಿಸ್ಥಾನ, ಸೌತ್ ಆಫ್ರಿಕಾ ಸೇರಿದಂತೆ ವಿವಿದ ದೇಶದ ವಿದ್ಯಾರ್ಥಿಗಳು, ಹೊರ ರಾಜ್ಯದ ವಿದ್ಯಾರ್ಥಿಗಳ ತಮ್ಮೂರಿನ ವೈವಿದ್ಯಮಯ ಖಾದ್ಯಗಳು ಭಾಗವಹಿಸಿದ್ದವರ ಗಮನಸೆಳೆಯಿತು. ಉಳಿದಂತೆ ಪಾನಿಪೂರಿ, ಮಸಾಲಪೂರಿ, ಬಿರಿಯಾನಿ, ಕೋರಿ ರೊಟ್ಟಿ, ಕೇರಳದ ಕಪ್ಪ ಬಿರಿಯಾನಿ, ಪಾನಿಯ ಮಳಿಗೆಗಳೂ ಇದ್ದು ಮಧ್ಯಾಹ್ನದ ವೇಳೆಗೆ ಆಹಾರ ಮೇಳದಲ್ಲಿ ಜನ ತುಂಬಿದ್ದರು.
"ಮಂಗಳೂರು ವಿವಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಜೊತೆಗೆ ವಿದೇಶಿ ವಿದ್ಯಾರ್ಥಿಗಳು ಕೂಡಾ ಅವರ ದೇಶದ ತಿಂಡಿ ತಿನಿಸುಗಳನ್ನು ತಯಾರಿಸಿ ಇಂದಿನ ಈ ಆಹಾರ ಮಳಿಗೆಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ನಮ್ಮ ದೇಶದಲ್ಲಿ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಬೇರೆ ಬೇರೆ ಊರಿನ ಬೇರೆ ಬೇರೆ ಹೆಸರಿನ ಆಹಾರದ ಜೊತೆಗೆ ತಿಂಡಿ ಸವಿಯುವುದು ಖುಷಿ. ನಮ್ಮ ವಿದ್ಯಾರ್ಥಿಗಳು ಅವರು ತಯಾರಿಸಿದ ತಿಂಡಿ ಗಳನ್ನು ಅಷ್ಟೇ ಖುಷಿಯಲ್ಲಿ ಕೊಟ್ಟಿದ್ದಾರೆ. ಆಹಾರಕ್ಕೆ ಸಂಬಂಧಿಸಿದ ಇಂತಹ ಅಹಾರ ಪ್ರದರ್ಶನ ಇನ್ನು ಮುಂದೆಯೂ ಇದೇ ರೀತಿಯಲ್ಲಿ ನಡೆಸುವ ಯೋಜನೆ ಹಾಕಿದ್ದೇವೆ ಈ ಮೂಲಕ ಬೇರೆ ಬೇರೆ ಊರಿನ ಹಾಗೂ ಬೇರೆ ಬೇರೆ ದೇಶದ ಆಹಾರಗಳ ಪರಿಚಯವಾಗಲಿ ಅನ್ನೋದು ಆಶಯವಾಗಿದೆ".
- ಪ್ರೊ.ಪಿ.ಎಲ್.ಧರ್ಮ, ಮಂಗಳೂರು ವಿವಿ ಕುಲಪತಿ