ದ.ಕ.ಜಿಲ್ಲಾ ಕಾರಾಗೃಹಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ
ಮಂಗಳೂರು: ನಗರದ ಕೋಡಿಯಾಲ್ ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜೈಲಿನೊಳಗೆ ಕೈದಿಗಳ ಹೊಡೆದಾಟ, ಜೈಲಿನೊಳಗೆ ಮಾದಕ ವಸ್ತುಗಳು, ಮೊಬೈಲ್ ಫೋನ್‌ಗಳು ಇತ್ಯಾದಿ ಪತ್ತೆಯಾಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ವೇಳೆ ಗೃಹ ಸಚಿವರು ಕೆಲವು ಕೈದಿಗಳ ಜತೆಗೂ ಮಾತನಾಡಿದರು. ಅಧಿಕಾರಿ, ಸಿಬ್ಬಂದಿಯ ನೇಮಕಾತಿಗೆ ಕ್ರಮ ವಹಿಸುವಂತೆ, ಕೆಟ್ಟು ಹೋಗಿರುವ ಜಾಮರ್ ಸರಿಪಡಿಸಲು ಕ್ರಮ ವಹಿಸುವಂತೆ ಬಂಧಿಖಾನೆ ಇಲಾಖೆಯ ಡಿಐಜಿಗೆ ಸೂಚನೆ ನೀಡಿದರು.
ಜೈಲಿನಲ್ಲಿ ಗಲಾಟೆಗೆ ಕಾರಣವಾಗುವ ಕುಖ್ಯಾತ ಕೈದಿಗಳನ್ನು ಬೇರೆ ಜಿಲ್ಲೆಗಳ ಜೈಲಿಗೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆಯೂ ಗೃಹ ಸಚಿವರು ಸೂಚಿಸಿದರು.
ಈ ಸಂದರ್ಭ ಶಾಸಕರಾದ ಅಶೋಕ್ ಕುಮಾರ್, ಐವನ್ ಡಿಸೋಜ, ಮಂಜುನಾಥ ಭಂಡಾರಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ, ಬಂಧಿಖಾನೆ ಇಲಾಖೆಯ ಡಿಐಜಿ ಕೆ.ಸಿ. ದಿವ್ಯಶ್ರೀ, ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮತ್ತಿತರರಿದ್ದರು.