ಕಣ್ಣೂರು ದಯಂಬು: ಗುಡ್ಡ ಕುಸಿತ; ಮನೆಗಳಿಗೆ ಹಾನಿ
Update: 2025-06-16 18:50 IST
ಮಂಗಳೂರು: ನಗರ ಹೊರವಲಯದ ಕಣ್ಣೂರಿನ ದಯಂಬು ಎಂಬಲ್ಲಿ ಗುಡ್ಡ ಕುಸಿದ ಪರಿಣಾಮ ಎರಡು ಮನೆಗಳಿಗೆ ಹಾನಿಯಾದ ಘಟನೆ ಸೋಮವಾರ ಅಪರಾಹ್ನ ಸಂಭವಿಸಿದೆ.
ಸುಮಾರು 3 ಗಂಟೆಗೆ ಮಳೆ ನೀರಿನೊಂದಿಗೆ ಗುಡ್ಡ ಕುಸಿಯಲಾರಂಭಿಸಿತು. ಜೊತೆಗೆ ಮರಮಟ್ಟುಗಳು ಕೂಡ ಉರುಳಿದವು. ಇದರಿಂದ ಮುಹಮ್ಮದ್ ಸಾದಿಕ್ ಮತ್ತು ಮೈಮುನಾ ಎಂಬವರಿಗೆ ಸೇರಿದ ಎರಡು ಮನೆಗಳಿಗೆ ಹಾನಿಯಾಗಿದೆ. ಮೈಮುನಾ ಅವರ ಹೆಂಚಿನ ಮನೆಗೆ ಸಂಪೂರ್ಣ ಹಾನಿಯಾಗಿದೆ. ಎರಡೂ ಮನೆಯೊಳಗೆ ಕೆಸರು ನೀರು ನುಗ್ಗಿವೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.
ಈ ಪರಿಸರದಲ್ಲಿ ಇನ್ನೂ ಅನೇಕ ಮನೆಗಳಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಕೊಳ್ಳದಿದ್ದರೆ ಅನಾಹುತ ಎದುರಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.