ವಿದ್ಯಾರ್ಥಿನಿ ಆತ್ಮಹತ್ಯೆ
ಉಳ್ಳಾಲ: ಪದವಿ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮ ಹತ್ಯೆಗೈದ ಘಟನೆ ತಲಪಾಡಿ ದೇವಿಪುರದ ಖಾಸಗಿ ವಿದ್ಯಾಲಯದ ಕ್ಯಾಂಪಸ್ಸಿನ ಸಿಬ್ಬಂದಿ ವಸತಿ ಗೃಹದಲ್ಲಿ ನಡೆದಿದೆ.
ಮಂಗಳೂರು ಬೆಂದೂರ್ ಸೈಂಟ್ ಆಗ್ನೆಸ್ ಕಾಲೇಜಲ್ಲಿ ದ್ವಿತೀಯ ಬಿಎ ವ್ಯಾಸಂಗ ನಡೆಸುತ್ತಿರುವ ವಿದ್ಯಾರ್ಥಿನಿ ಶ್ರೇಯ (19) ಆತ್ಮ ಹತ್ಯೆಗೈದ ವಿದ್ಯಾರ್ಥಿನಿ.
ತಲಪಾಡಿ ನಾರ್ಲ ನಿವಾಸಿಯಾದ ಶ್ರೇಯಳ ತಾಯಿ ಪುಷ್ಪಲತಾ ಅವರು ದೇವಿಪುರದ ಖಾಸಗಿ ವಿದ್ಯಾಲಯದಲ್ಲಿ ಅಟೆಂಡರ್ ಕೆಲಸದಲ್ಲಿದ್ದು ಸಂಸ್ಥೆಯ ವಸತಿ ಗೃಹದಲ್ಲೇ ಗಂಡ ಮತ್ತು ಮಕ್ಕಳ ಜೊತೆಯಲ್ಲಿ ನೆಲೆಸಿದ್ದರು.
ಶ್ರೇಯ ಎಂದಿನಂತೆ ಸೋಮವಾರ ಬೆಳಿಗ್ಗೆಯೂ ಕಾಲೇಜಿಗೆ ತೆರಳಿದ್ದಳು.ಸಂಜೆ ಶ್ರೇಯಾಳ ತಂಗಿ ಶಾಲೆ ಮುಗಿಸಿ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿದ್ದು,ಒಳ ಹೋಗಿ ನೋಡಿದಾಗ ಮನೆಯ ಬೆಡ್ ರೂಂನ ಕಿಟಕಿಗೆ ಶ್ರೇಯ ಶಾಲಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿದೆ.
ಶ್ರೇಯ ಬರೆದಿರುವ ಡೆತ್ ನೋಟ್ ಪೊಲೀಸರಿಗೆ ದೊರೆತಿದೆ. ಉಳ್ಳಾಲ ಪೊಲೀಸರು ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.