ಸುಳ್ಯ: ಅಕ್ರಮ ಜಾನುವಾರು ಸಾಗಾಟ ಪ್ರಕರಣ; ಆರೋಪಿ ರತೀಶ್‌ಗೆ ಜೈಲು ಶಿಕ್ಷೆ
ಸುಳ್ಯ: ಅಕ್ರಮ ಜಾನುವಾರು ಸಾಗಾಟ ಪ್ರಕರಣದ ವಿಚಾರಣೆ ನಡೆಸಿದ ಸುಳ್ಯ ನ್ಯಾಯಾಲಯ ಆರೋಪಿಯ ಮೇಲಿನ ಆರೋಪ ಸಾಬೀತಾಗಿದ್ದು ನ್ಯಾಯಾಲಯ 3 ವರ್ಷ ಶಿಕ್ಷೆ ವಿಧಿಸಿದೆ.
ರತೀಶ್ ಎಂಬಾತ ಶಿಕ್ಷೆಗೆ ಒಳಗಾದ ಆರೋಪಿ ಎಂದು ತಿಳಿದುಬಂದಿದೆ.
2023 ಜುಲೈ 13 ರಂದು ರತೀಶ್ ಜಾನುವಾರುಗಳನ್ನು ಸುಳ್ಳು ಕಾರಣ ಹೇಳಿ ವಧೆಮಾಡುವ ಉದ್ದೇಶದಿಂದ ಹಣ ನೀಡಿ ಖರೀದಿಸಿ ಪರವಾನಿಗೆ ಇಲ್ಲದೇ ಪಿಕ್ ಅಪ್ ವಾಹನದಲ್ಲಿ ಹಿಂಸಾತ್ಮಕವಾಗಿ ತುಂಬಿಕೊಂಡು ಹೋಗುತ್ತಿದ್ದಾ ಎಂಬ ಮಾಹಿತಿ ಪಡೆದ ಸುಳ್ಯ ಪೊಲೀಸರು ವಾಹನವನ್ನು ಜಾಲ್ಸೂರು ಗ್ರಾಮದ ಸೋಣಂಗೇರಿಯ ಆರ್ತಾಜೆ ಎಂಬಲ್ಲಿ ತಡೆದು, ಆರೋಪಿಯನ್ನು ವಶಪಡಿಸಿಕೊಂಡು ಕೇಸು ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಸುಳ್ಯ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಬಿ. ಮೋಹನ್ ಬಾಬು ಅವರು ಆರೋಪಿಯನ್ನು ಮಂಗಳವಾರ ದೋಷಿ ಎಂದು ತೀರ್ಪು ನೀಡಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ, 2020 ರ ಕಲಂ 4 ರಡಿಯಲ್ಲಿನ ಅಪರಾಧಕ್ಕೆ 3 ವರ್ಷಗಳ ಸಾದಾ ಕಾರಾಗೃಹ ವಾಸ ಶಿಕ್ಷೆ ನೀಡಿ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದರು.