ಮಂಗಳೂರು: ಪೌಷ್ಟಿಕ ಆಹಾರ ಪೂರೈಕೆಯಲ್ಲಿ ಪ್ರಗತಿ ಸಾಧಿಸಲು ಜಿಪಂ ಸಿಇಒ ಸೂಚನೆ
ಮಂಗಳೂರು, ಜೂ.26: ಪೌಷ್ಟಿಕ ಆಹಾರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದ.ಕ. ಜಿಲ್ಲೆಯ ಪ್ರಗತಿಯು ತೀರಾ ಕಡಿಮೆ ಇದೆ. ಹಾಗಾಗಿ ಜಿಲ್ಲೆಯಲ್ಲಿ ಪೌಷ್ಟಿಕ ಆಹಾರ ಪೂರೈಸುವ ಕಾರ್ಯಕ್ರಮದಲ್ಲಿ ಪ್ರಗತಿ ಸಾಧಿಸುವ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ದ.ಕ.ಜಿಪಂ ಸಿಇಒ ಡಾ.ಕೆ. ಆನಂದ್ ಸೂಚಿಸಿದರು.
ದ.ಕ.ಜಿಪಂ ಮಿನಿ ಸಭಾಂಗಣದಲ್ಲಿ ಗುರುವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆ ಹೊಂದಿರುವ 20 ಮಕ್ಕಳಿದ್ದು, ಉತ್ತಮ ಆರೈಕೆಗಾಗಿ ಅವರನ್ನು ಪೌಷ್ಟಿ ಕಾಂಶ ಪುನರ್ವಸತಿ ಕೇಂದ್ರ (ಎನ್‌ಆರ್‌ಸಿ)ಕ್ಕೆ ದಾಖಲಿಸಬೇಕು. ಮಕ್ಕಳಿಗೆ ಸೂಕ್ತವಾದ ಪೌಷ್ಟಿಕ ಆಹಾರ, ಆರೈಕೆಯ ಜೊತೆಗೆ ಕೇಂದ್ರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಅಲ್ಲದೆ ಜಿಲ್ಲೆಯನ್ನು ಅಪೌಷ್ಟಿಕತೆ ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದು ಡಾ. ಆನಂದ್ ಕರೆ ನೀಡಿದರು.
3ರಿಂದ 5 ವಷರ್ ಪ್ರಾದ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಬೇಕು. ಶಾಲೆಗೆ ಹೋಗದಿರುವ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ದೊರಕಿಸುವ ಬಗ್ಗೆ ಮಹಿಳಾ ಸಭೆ, ಗ್ರಾಮ ಸಭೆಗಳಲ್ಲಿ ಚರ್ಚಿಸ ಬೇಕು. ಅಂಗನವಾಡಿ ಕಟ್ಟಡಗಳ ನಿರ್ವಹಣೆ ಯೋಜನೆಯಡಿ ಅಂಗನವಾಡಿ ಕೇಂದ್ರಗಳ ದುರಸ್ತಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ 2024ರ ಜುಲೈನಿಂದ ಡಿಸೆಂಬರ್‌ವರೆಗೆ 2 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ 13 ವರದಕ್ಷಿಣೆ ಪ್ರಕರಣಗಳು ದಾಖಲಾಗಿದೆ. 11 ಪ್ರಕರಣಗಳು ತನಿಖೆ ಹಂತದಲ್ಲಿದೆ. ಬಾಲ್ಯ ವಿವಾಹ, ಬಾಲ ಗರ್ಭಿಣಿಯರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ವಹಿಸಲು ಸಿಇಒ ಸೂಚಿಸಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಕಾವಲು ಸಮಿತಿ ಸಭೆ ನಡೆಸಿ ಬಾಲ್ಯ ವಿವಾಹ ಮತ್ತು ಹದಿಹರೆಯದ ಗರ್ಭಧಾರಣೆ ಬಗ್ಗೆ ಚರ್ಚಿಸಿ ಅವುಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು. ಬಾಲ್ಯ ವಿವಾಹ ಕಂಡು ಬಂದರೆ 1098 ಸಹಾಯವಾಣಿಗೆ ದೂರು ನೀಡಬೇಕು. ಬಾಲ್ಯ ವಿವಾಹ, ಹದಿಹರೆಯದ ಗರ್ಭ ಧಾರಣೆ ತಡೆಯಲು ಅರಿವು ಕಾರ್ಯಗಾರವನ್ನು ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನಿಸಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್, ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‌ನ ಹಿಲ್ಡಾ ರಾಯಪ್ಪನ್, ಜಿಪಂ ಸಿಇಒ ಸಂಧ್ಯಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ.ಉಳೆಪಾಡಿ, ಉಪಸ್ಥಿತರಿದ್ದರು.