×
Ad

ಪುತ್ತೂರಿನಲ್ಲಿ ಹೆಣ್ಣಿಗೆ ಅನ್ಯಾಯ ಆದಾಗ ಮಾತನಾಡುವವರಿಲ್ಲ: ಮಹಮ್ಮದ್ ಆಲಿ

Update: 2025-06-30 18:03 IST

ಪುತ್ತೂರು: ಒಂದು ಪ್ರಾಣಿಗೆ ಅನ್ಯಾಯ ಆದಾಗ ಪ್ರಾಣಿ ದಯಾಸಂಘದವರು ಮಾತನಾಡುತ್ತಾರೆ. ಆದರೆ ಪುತ್ತೂರಿನಲ್ಲಿ ಹೆಣ್ಣಿಗೆ ಅನ್ಯಾಯ ಆದಾಗ ಮಾತನಾಡುವವರಿಲ್ಲ. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಅನ್ಯಾಯ ನಡೆದಾಗ ಮಾತನಾಡಬೇಕಾಗಿರುವುದು ನಾಗರಿಕ ಸಮಾಜದ ಜವಾಬ್ದಾರಿಯಾಗಿದೆ ಎಂದು ಪುತ್ತೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ತಿಳಿಸಿದ್ದಾರೆ.

ಪುತ್ತೂರಿನಲ್ಲಿ ನಗರಸಭಾ ಸದಸ್ಯ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ ರಾವ್ ಎಂಬಾತನಿಂದ ನಡೆದಿದೆ ಎನ್ನಲಾದ ಅತ್ಯಾಚಾರ, ವಂಚನೆ ಪ್ರಕರಣವು ಸಮಾಜ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇದೀಗ ಆತ ನಡೆಸಿರುವ ಅತ್ಯಾಚಾರದಿಂದಾಗಿ ಮಗುವಿಗೆ ಜನ್ಮ ನೀಡಿದ ಯುವತಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿದೆ ಎಂದು ಮಹಮ್ಮದ್ ಆಲಿ ತಿಳಿಸಿದ್ದಾರೆ.

ಅವರು ಸೋಮವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಗನ್ನಿವಾಸ್ ರಾವ್ ಅವರ ಪುತ್ರನಿಂದ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಠಾಣೆಯಲ್ಲಿ ಮಾತುಕತೆ ನಡೆದಿದೆ. ಮಾತುಕತೆಯ ವೇಳೆ ಅವರಿಬ್ಬರ ಮದುವೆ ಮಾಡಿಸುವುದಾಗಿ ಜಗನ್ನಿವಾಸ್ ರಾವ್ ಒಪ್ಪಿ ಕೊಂಡಿರುವುದು ಮಾದ್ಯಮದ ಮೂಲಕ ತಿಳಿದು ಬಂದಿತ್ತು. ಹಾಗೆ ಆಗಿದ್ದರೆ ಉತ್ತಮವಾಗುತ್ತಿತ್ತು. ಆದರೆ ಹಾಗೆ ನಡೆಯದೆ ಇದೀಗ ಸಂತ್ರಸ್ತ ಯುವತಿಗೆ ವಂಚನೆಯಾಗಿದೆ. ಅಷ್ಟಕ್ಕೂ ಪೊಲೀಸ್ ಠಾಣೆಯಲ್ಲಿ ರಾಜಿ ಪಂಚಾಯತಿಗೆ ನಡೆಸಿರುವುದು ಸರಿಯೇ ಎಂದು ಪ್ರಶ್ನಿಸಿದ ಮಹಮ್ಮದ್ ಆಲಿ ಪಂಚಾಯತಿಗೆ ಮಾಡಿದ ವರು ಮದುವೆ ಮಾಡಿಸಬೇಕಿತ್ತು. ಠಾಣೆಯಲ್ಲಿ ದೂರು ದಾಖಲಾಗುವುದನ್ನು ತಡೆದಿರುವವರ ಮೇಲೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಪುತ್ತೂರಿನಲ್ಲಿ ಸಣ್ಣ ವಿಚಾರಕ್ಕೂ ಹೋರಾಟ ನಡೆಸುತ್ತಿರುವ ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ, ಬಜರಂಗದಳದ ಮುರಳೀಕೃಷ್ಣ ಹಸಂತಡ್ಕ ಇದೀಗ ಓರ್ವ ಯುವತಿಗೆ ಇಷ್ಟೊಂದು ಅನ್ಯಾಯ ನಡೆದಿರುವಾಗ ಎಲ್ಲಿ ಅಡಗಿ ಕುಳಿತಿದ್ದಾರೆ. ಆ ಹೆಣ್ಣು ಮಗು ಹಿಂದೂ ಅಲ್ಲವೇ ಅವರಿಗೆ ನ್ಯಾಯ ಸಿಗಬೇಡವೇ ಎಂದು ಪ್ರಶ್ನಿಸಿದ ಅವರು ಪುತ್ತೂರಿನಲ್ಲಿ ಡಾ. ಆಶಾ ಪುತ್ತೂರಾಯ ಎಂಬ ಸರ್ಕಾರಿ ವೈದ್ಯರ ಮೇಲೆ ರೋಗಿಗಳ ಪೈಕಿಯವರು ಜೋರಾಗಿ ಮಾತನಾಡಿದ ಕಾರಣಕ್ಕೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿರುವ ಅರುಣ್ ಪುತ್ತಿಲ ಅವರಿಗೆ ಆಶಾ ಪುತ್ತೂರಾಯ ಅವರ ನಿಂದನೆ ಅಪರಾಧವಾಗಿ ಕಾಣುತ್ತಿದೆ ಆದರೆ ಅತ್ಯಾಚಾರ ನಡೆಸಿ ವಂಚನೆ ಮಾಡಿರುವ ಈ ಪ್ರಕರಣವು ಅಪರಾಧವಾಗಿ ಕಾಣುತ್ತಿಲ್ಲವೇ. ಓರ್ವ ಹಿಂದೂ ಯುವತಿಗೆ ಅನ್ಯಾಯವಾದರೂ ಯಾವ ಹಿಂದೂ ಮುಖಂಡ, ಬಿಜೆಪಿಗರು ಧ್ವನಿ ಎತ್ತಿಲ್ಲ, ಅದೇ ಈ ಪ್ರಕರಣದಲ್ಲಿ ಮುಸ್ಲಿಂ ಆರೋಪಿಯಾಗಿದ್ದರೆ ಇಡೀ ಪುತ್ತೂರಿಗೆ ಬೆಂಕಿ ಕೊಡುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರೋಪಿಯು ತನ್ನ ಮನೆಯಲ್ಲಿಯೇ ಅತ್ಯಾಚಾರ ಎಸಗಿದ್ದು, ಆತ ಲವ್ ಮಾಡಿದ್ದಲ್ಲಿ ಆಕೆಯನ್ನು ಮದುವೆ ಯಾಗುತ್ತಿದ್ದ. ಆ ಹೆಣ್ಣು ಮಗಳ ಜೀವನ ಹಾಳು ಮಾಡುವುದೇ ಆತನ ಉದ್ದೇಶವಾಗಿರುವಂತೆ ತೋರು ತ್ತಿದೆ. ಈ ಪ್ರಕರಣದಲ್ಲಿ ಮೊದಲ ಆರೋಪಿಯು ಆತನ ಅಪ್ಪ. ಆತ ವಾಸ್ತುತಜ್ಞನಲ್ಲ ವಾತ್ಸಾಯನ ತಜ್ಞ ಎಂದು ಆರೋಪಿಸಿದ ಅವರು ಪೊಲೀಸರು ಆರೋಪಿಯ ಮನೆಯಲ್ಲೂ ತನಿಖೆ ನಡೆಸಬೇಕು. ಈ ಪ್ರಕರಣ ಮಾತ್ರವಲ್ಲದೆ ಆ ಮನೆಯಲ್ಲಿ ಬೇರೆ ಪ್ರಕರಣಗಳು ನಡೆದಿದೆಯೋ ಅನ್ನೋದನ್ನೂ ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮೌರಿಸ್ ಮಸ್ಕರೇನಸ್, ಸುರೇಶ್‌ ಪೂಜಾರಿ, ಹರೀಶ್ ಆಚಾರ್ಯ, ರಶೀದ್ ಮರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News