ಬಜ್ಪೆ: ಶಾಲೆಯ ಮೇಲ್ಛಾವಣಿ ಕುಸಿದು ವಿದ್ಯಾರ್ಥಿಗೆ ಗಾಯ
ಬಜ್ಪೆ: ಪಾಠ ಮಾಡುತ್ತಿರುವಾಗಲೇ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದು ವಿದ್ಯಾರ್ಥಿ ಗಾಯಗೊಂಡಿರುವ ಘಟನೆ ಬಜ್ಪೆಯ ಕೆಂಜಾರುವಿನ ಶ್ರೀ ಮುಖ್ಯಪ್ರಾಣ ಅನುದಾನ ರಹಿತ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸಂಭವಿಸಿದೆ.
ಘಟನೆಯಿಂದ ಎಲ್‌ಕೆಜಿ ವಿದ್ಯಾರ್ಥಿ ಶೋನಿತ್ (5) ಮೂಗಿಗೆ ಗಾಯವಾಗಿದ್ದು, ನಗರದ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಎಲ್‌ಕೆಜಿ ಮತ್ತು ಯುಕೆಜಿಯ 20 ಮಕ್ಕಳು ಪಾಣಾಪಾಯ ದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಶಾಲೆಯಲ್ಲಿ ಟೀಚರ್ ಪಾಠ ಮಾಡುತ್ತಿದ್ದಂತೆ ಜೋರಾಗಿ ಗಾಳಿ ಸಹಿತ ಮಳೆಯಾಗಿದೆ. ಗಾಳಿಯ ರಭಸಕ್ಕೆ ಎಲ್ ಕೆಜಿ- ಯುಕೆಜಿ ತರಗತಿ ನಡೆಯುತ್ತಿದ್ದ ಕೊಠಡಿಯ ಒಂದು ಭಾಗದ ಮೇಲ್ಛಾವಣಿ ಕುಸಿದು ಶಾಲೆಯ ಒಳಭಾಗಕ್ಕೆ ಬಿದ್ದಿದೆ. ಈ ವೇಳೆ ಶೋನಿತ್ ನ ಮೇಲೆ ಹೆಂಚಿನ ತುಂಡು ಬಿದ್ದಿದ್ದು, ಆತನ ಮೂಗಿಗೆ ಗಂಭೀರ ಗಾಯವಾಗಿತ್ತು. ತಕ್ಷಣ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಘಟನೆ ನಡೆದ ಸಂದರ್ಭ ಉಳಿದ ಸುಮಾರು 20 ವಿದ್ಯಾರ್ಥಿಗಳು ಅದೇ ಕೊಠಡಿಯ ಮತ್ತೊಂದು ಪಾರ್ಶ್ವ ದಲ್ಲಿದ್ದ ಪರಿಣಾಮ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಮುಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಕ್ಕಳ ಹೆತ್ತವರು ಮತ್ತು ಅಧ್ಯಾಪಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಮಂಗಳೂರು ಉತ್ತರ ವಲಯ ಶಿಕ್ಷಾಣಾಧಿಕಾರಿ ಜೇಮ್ಸ್ ಕುಟಿನೊ ಅವರು ಸ್ಥಳಕ್ಕೆ ಭೇಟಿ ನೀಡಿ ಅಧ್ಯಾಪಕರು ಮತ್ತು ಪೋಷಕರೊಂದಿಗೆ ಮಾಹಿತಿ ಪಡೆದುಕೊಂಡು ಶಾಲೆಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಪರಿಶೀಲಿಸಿ ದ್ದಾರೆ ಎಂದು ತಿಳಿದು ಬಂದಿದೆ.
ಮೂರು ವರ್ಷಗಳ ಹಿಂದೆಯಷ್ಟೇ ದುರಸ್ತಿ ಮಾಡಲಾಗಿದ್ದ ಶಾಲೆ
ಈ ಶಾಲೆ ಅನುದಾನ ಸಹಿತ ಶಾಲೆಯಾಗಿದ್ದು, ಈ ಶಾಲೆಯ ಹಳೆ ವಿದ್ಯಾರ್ಥಿಗಳು ಎಲ್‌ಕೆಜಿ- ಯುಕೆಜಿ ನಡೆಸಿಕೊಂಡು ಹೋಗುತ್ತಿದ್ದಾರೆ. ಕಳೆದ ಮೂರು ವರ್ಷಗಳ ಹಿಂದಷ್ಟೇ ಈ ಕಟ್ಟಡ ದುರಸ್ತಿ ಮಾಡಲಾ ಗಿದ್ದು, ಮೇಲ್ಛಾವಣಿಯ ರೀಪು, ಪಕ್ಕಾಸು, ಹೆಂಚುಗಳನ್ನು ಅಳವಡಿಸಲಾಗಿತ್ತು. ಆದರೆ, ಇಂದಿನ ಮಳೆಗೆ ದಿಢೀರ್ ಕುಸಿದು ಬಿದ್ದಿದ್ದು, ಮಕ್ಕಳ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಶಾಲೆಯ ಮೇಲ್ಛಾವಣಿ ಯನ್ನು ರಚಿಸುವಾಗ ಗುಣಮಟ್ಟ ಕಾಯ್ದುಕೊಂಡಿಲ್ಲ ಹೀಗಾಗಿ ಕುಸಿದು ಬಿದ್ದಿದೆ ಎಂದು ಪೋಷಕರು ಆರೋಪಿಸಿದ್ದಾರೆ.