ಲಕ್ಷ್ಮಣ ಕುಮಾರ್ ಮಲ್ಲೂರ್‌ಗೆ ರಂಗ ಭಾಸ್ಕರ ಪ್ರಶಸ್ತಿ ಪ್ರದಾನ
ಮಂಗಳೂರು, ಜು.7: ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನವು ಸಂಸ್ಥೆಯ ಸ್ಥಾಪಕ ಸದಸ್ಯ ದಿ. ಭಾಸ್ಕರ ನೆಲ್ಲಿತೀರ್ಥ ಸ್ಮರಣಾರ್ಥ ನೀಡುವ ರಂಗ ಭಾಸ್ಕರ- 2025 ಪ್ರಶಸ್ತಿಯನ್ನು ಹಿರಿಯ ನಟ, ನಿರ್ದೇಶಕ ಲಕ್ಷ್ಮಣ ಕುಮಾರ್ ಮಲ್ಲೂರು ಅವರಿಗೆ ನಗರದ ಸಂತ ಅಲೋಶ್ಯಿಸ್ ವಿವಿಯ ಎಲ್‌ಸಿಆರ್‌ಐ ಸಭಾಂಗಣ ದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಸಂಸ್ಥೆಯ 17ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ರಾಂತ ಕುಲಪತಿ ಬಿ.ಎ.ವಿವೇಕ ರೈ ಒಂದು ನಗರ ಜೀವಂತವಾಗಿರುವುದು ಅಲ್ಲಿನ ಬಹುಮಹಡಿ ಕಟ್ಟಡಗಳು, ಕಾಂಕ್ರೀಟ್ ರಸ್ತೆಗಳು, ಅಲ್ಲಿನ ಮಾಲ್‌ಗಳಿಂದ ಅಲ್ಲ. ಅದು ಜೀವಂತವಾಗಿರುವುದು ರಂಗ ಭೂಮಿ, ಸಾಹಿತ್ಯ, ಕಲೆ ಇತ್ಯಾದಿ ಮನುಷ್ಯರ ಬದುಕಿನ ಸೃಜನಾತ್ಮಕ ಚಟುವಟಿಕೆಗಳಿಂದ.ಉತ್ತಮ ಅಭಿರುಚಿಯ ಕಲೆಗಳನ್ನು ಒಳಗೊಂಡ ಸಂಸ್ಕೃತಿ ನಗರದ ಮಿದುಳು ಇದ್ದಂತೆ ಎಂದು ಹೇಳಿದರು.
ನಿಷೇಧಾತ್ಮಕ ರೂಪದಲ್ಲಿ ಮಾತನಾಡುವುದು, ಕೆಟ್ಟದಾಗಿ ಯೂುಟ್ಯೂಬ್ ವಿಡಿಯೊಗಳನ್ನು ಮಾಡುವುದು ಇತ್ಯಾದಿ ಕೊಳಕು ಚರಂಡಿಗೆ ಸೇರುತ್ತದೆ. ಅಂತಿಮವಾಗಿ ಉಳಿಯುವುದು ಸತ್ಯ ಮಾತ್ರ. ಬಹುಮುಖಿ ಸಂಸ್ಕೃತಿಯನ್ನು ಕಟ್ಟುವ, ನಶಿಸಿ ಹೋಗುತ್ತಿರುವ ನಗರದ ಬದುಕನ್ನು ಸಾಹಿತ್ಯ, ಸಾಂಸ್ಕೃತಿಕ ಚಟು ವಟಿಕೆಗಳ ಮೂಲಕ ಹಿಡಿದಿಟ್ಟುಕೊಳ್ಳುವ ಸತ್ಯವನ್ನು ಸದಾ ಕಾಪಾಡಬೇಕಿದೆ ಎಂದು ಪ್ರೊ. ಬಿ.ಎ.ವಿವೇಕ ರೈ ಅಭಿಪ್ರಾಯಪಟ್ಟರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾಗವತ ಪಟ್ಲ ಸತೀಶ್ ಶೆಟ್ಟಿ, ರಂಗ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್, ಅಲ್ವಿನ್ ಡೇಸಾ, ಪುಂಡಲೀಕ ಹೊಸಬೆಟ್ಟು, ಸಂತೋಷ್ ಶೆಟ್ಟಿ, ಪ್ರಶಸ್ತಿ ಪ್ರಾಯೋಜಕ ವಿಶ್ವನಾಥ ಶೆಣೈ ಉಡುಪಿ ಭಾಗವಹಿಸಿದ್ದರು.
ದಿನೇಶ್ ನಾಯ್ಕ ಸ್ವಾಗತಿಸಿದರು. ಶಶಿರಾಜ ಕಾವೂರು ಕಾರ್ಯಕ್ರಮ ನಿರೂಪಿಸಿದರು. ಗೋಪಾಲ ಶೆಟ್ಟಿ ವಂದಿಸಿದರು.