×
Ad

ಯುವ ಜನತೆ ಜಾಗೃತರಾದರೆ ಮಾದಕ ವ್ಯಸನ ಅಪರಾಧವನ್ನು ತಡೆಗಟ್ಟಲು ಸಾಧ್ಯ: ಜೈಬುನ್ನಿಸಾ

Update: 2025-07-09 20:15 IST

ಮಂಗಳೂರು: ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮಂಗಳೂರು, ಲಿಂಕ್ ವ್ಯಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರ ಬಜಾಲ್, ಮಂಗಳೂರು ಹಾಗೂ ಸೈಂಟ್ ಅಲೋಶಿಯಸ್ ಕಾಲೇಜು ಪರಿಗಣಿತ ವಿಶ್ವ ವಿದ್ಯಾನಿಲಯ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಅಂತರ್‌ರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನ ಕಾರ್ಯಕ್ರಮ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನಿಸಾ ಮಾತನಾಡಿ, ಮಾದಕ ವಸ್ತು ಮಾರಾಟ ಮತ್ತು ಅಕ್ರಮ ಸಾಗಾಣಿಕೆ ಜಾಗತಿಕವಾಗಿ ಪಸರಿಸಿದೆ. ಯುವಜನಾಂಗ ಬಲಿಪಶು ಆಗುತ್ತಿದ್ದು, ಕ್ಷಣಿಕ ಸುಖಕ್ಕಾಗಿ ಮಾನಸಿಕ ಒತ್ತಡ ನಿವಾರಣೆಗಾಗಿ ಸಹಪಾಠಿಗಳ ಸಹವಾಸದೊಂದಿಗೆ, ಪ್ರಾಯೋಗಿತ ವಾಗಿ ಬಳಸುವುದು ಸರ್ವೆ ಸಾಮಾನ್ಯವಾಗಿದೆ. ಯುವ ಜನತೆ ಜಾಗೃತಿಗೊಂಡು, ಮಾದಕ ವ್ಯಸನವನ್ನು ವಿರೋಧಿಸುವ ಮೂಲಕ ಅಪರಾಧವನ್ನು ತಡೆಗಟ್ಟಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸರಕಾರಿ ಲೇಡಿಗೋಶನ್ ಆಸ್ಪತ್ರೆವೈದ್ಯಕೀಯ ಅಧೀಕ್ಷಕ ಡಾ.ದುರ್ಗಾ ಪ್ರಸಾದ್ ಎಂ. ಆರ್ ಮಾತನಾಡಿ ಒಬ್ಬ ವ್ಯಕ್ತಿಗೆ ಕುಟುಂಬದ ಉತ್ತಮ ಸಂಸ್ಕಾರ, ಸಂಸ್ಕೃತಿ ಹಿರಿಯರ ಆಶೀರ್ವಾದದೊಂದಿಗೆ ಬೆಳೆದು ಬಂದಲ್ಲಿ ಸಮಾಜದಲ್ಲಿ ಒಬ್ಬ ವ್ಯಕ್ತಿಯಾಗಿ ಗುರುತಿಸಿ ಕೊಳ್ಳುತ್ತಾನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಉಪಕುಲಪತಿ (ಪ್ರಭಾರ) ಆಲ್ವಿನ್ ಡೇಸಾ ಮಾತನಾಡಿ ‘ಆರೋಗ್ಯಕರ, ಆರೋಗ್ಯವಂತ ಸಮಾಜಕ್ಕಾಗಿ ವಿದ್ಯಾರ್ಥಿ ಹಂತದಲ್ಲಿ ಬೇರೆ ಬೇರೆ ಸಂಘಟನೆಗಳ ಮೂಲಕ ಮಾದಕ ವಸ್ತು ವ್ಯಸನ ಮತ್ತು ಮಾರಾಟದ ಬಗ್ಗೆ ಜಾಗೃತಿಯನ್ನು ಮೂಡಿಸುವು ದರೊಂದಿಗೆ ಸಮಾಜದಲ್ಲಿ ಯಾವುದೇ ಒಬ್ಬ ವ್ಯಕ್ತಿಯನ್ನು ಕಡೆಗಣಿಸದೆ ಅವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿಬಜಾಲ್‌ಲಿಂಕ್ ವ್ಯಸನ ಮುಕ್ತ ಪುನರ್ವಸತಿ ಕೇಂದ್ರದ ಅಧ್ಯಕ್ಷ ಡಾ.ಸತೀಶ್ ರಾವ್, ಸರಕಾರಿ ಲೇಡಿಗೋಶನ್ ಆಸ್ಪತ್ರೆ ಆರ್.ಎಂ.ಒ ಡಾ.ಜಗದೀಶ್, ಮನೋರೋಗ ತಜ್ಞ ಡಾ.ಪ್ರಜಕ್ತ ವಿ. ರಾವ್‌ಭಾಗವಹಿಸಿದ್ದರು.

ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿ ಡಾ.ಸುದರ್ಶನ್ ಇವರು ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನ ಆಚರಿಸುವ ಉದ್ದೇಶದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಕೆ.ಎಂ.ಸಿ ಮೆಡಿಕಲ್ ಕಾಲೇಜು ಆಸ್ಪತ್ರೆ ಮನೋರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕಡಾ.ಜೊನಾಥನ್, ಬಜಾಲ್‌ಲಿಂಕ್ ವ್ಯಸನ ಮುಕ್ತ ಪುನರ್ವಸತಿ ಕೇಂದ್ರದ ಲಿಡಿಯಾ ಲೋಬೋ ಮಾಹಿತಿ ನೀಡಿದರು.

ಕೆರೆಲ್ ಶಾರೆಲ್ ಪೆರೈರಾ ಸ್ವಾಗತಿಸಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ ಉಳೆಪಾಡಿ ನಿರೂಪಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಕುಮಾರ್ ವಂದಿಸಿದರು. ಡಾ. ಸತೀಶ್ ರಾವ್ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ಕಾರ್ಯಕ್ರಮದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News