×
Ad

ಮಂಗಳೂರಿನ ಕ್ಲಾಕ್ ಟವರ್ - ಸ್ಟೇಟ್‌ ಬ್ಯಾಂಕ್ ದ್ವಿಮುಖ ಸಂಚಾರ: ವರದಿ ಸಲ್ಲಿಸಲು ಡಿಸಿ ಸೂಚನೆ

Update: 2025-07-10 19:51 IST

ಮಂಗಳೂರು, ಜು.10: ನಗರದ ಹೃದಯಭಾಗವಾದ ಕ್ಲಾಕ್‌ಟವರ್‌ನಿಂದ ಸ್ಟೇಟ್‌ಬ್ಯಾಂಕ್‌ವರೆಗೆ ಏಕಮುಖ ವಾಹನ ಸಂಚಾರವನ್ನು ದ್ವಿಮುಖ ಸಂಚಾರವಾಗಿ ಮಾರ್ಪಡಿಸುವ ಬಗ್ಗೆ ಕೂಡಲೇ ವರದಿ ಸಲ್ಲಿಸಲು ದ.ಕ.ಜಿಲ್ಲಾಧಿಕಾರಿ ಎಚ್. ದರ್ಶನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದ.ಕ.ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧದ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದೆ ದ್ವಿಮುಖ ವಾಹನ ಸಂಚಾರವಿದ್ದ ಈ ರಸ್ತೆಯನ್ನು ಏಕಮುಖ ಮಾಡಿರುವುದರಿಂದ ಸಾರ್ವಜನಿಕರಿಗೆ ಹಾಗೂ ಸಂಚಾರ ವ್ಯವಸ್ಥೆಗೆ ಸಮಸ್ಯೆ ಉಂಟಾಗಿರುವ ಬಗ್ಗೆ ದೂರುಗಳು ಬಂದಿದೆ. ಈ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಿ ದ್ವಿಮುಖ ಸಂಚಾರಕ್ಕೆ ಕೈಗೊಳ್ಳಬೇಕಾದ ಕಾಮಗಾರಿ ಮತ್ತು ಅಗತ್ಯವಿರುವ ಅನುದಾನದ ಕುರಿತು ಮುಂದಿನ ವಾರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸ್ಮಾರ್ಟ್ ಸಿಟಿ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಉಪ ಪೊಲೀಸ್ ಆಯುಕ್ತ ಸಿದ್ದಾರ್ಥ್ ಗೋಯಲ್ ಮಾತನಾಡಿ ಕ್ಲಾಕ್‌ಟವರ್ ರಸ್ತೆಯ ಸಮೀಪದಲ್ಲಿ ಪೊಲೀಸ್ ಠಾಣೆ, ಅಗ್ನಿಶಾಮಕ ಠಾಣೆ ಸೇರಿದಂತೆ ಹಲವು ಪ್ರಮುಖ ಕಚೇರಿಗಳಿವೆ. ಏಕಮುಖ ಸಂಚಾರ ದಿಂದ ತುರ್ತು ಸಂದರ್ಭಗಳಲ್ಲಿ ಸುತ್ತಿಬಳಸಿ ತೆರಳಬೇಕಾದ ಅನಿವಾರ್ಯತೆ ಇದೆ. ಪ್ರಸಕ್ತ ಈ ರಸ್ತೆಯ ಒಂದು ಬದಿಯಲ್ಲಿ ಬಸ್ ಹಾಗೂ ಇತರೆ ವಾಹನಗಳ ಪಾಕಿರ್ಂಗ್ ತಾಣವಾಗಿ ಮಾರ್ಪಟ್ಟಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಸ್ಮಾರ್ಟ್ ಸಿಟಿ ಅಧಿಕಾರಿಗಳು ಮಾತನಾಡಿ ಈ ರಸ್ತೆಯನ್ನು ಏಕಮುಖ ಸಂಚಾರ ರಸ್ತೆಯಾಗಿ ಅಭಿವೃದ್ಧಿ ಪಡಿಸಿ ಕಾಮಗಾರಿಯನ್ನು ಈಗಾಗಲೇ ಮಹಾನಗರಪಾಲಿಕೆಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.

ಸ್ಟೇಟ್‌ಬ್ಯಾಂಕ್ ಹ್ಯಾಮಿಲ್ಟನ್ ವೃತ್ತವನ್ನು ವೈಜ್ಞಾನಿಕವಾಗಿ ರ್ನಿುಸಲು ಎನ್‌ಐಟಿಕೆಯಿಂದ ತಾಂತ್ರಿಕ ವರದಿ ಪಡೆಯಲಾಗಿದೆ. ಈ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಹಂಪನಕಟ್ಟೆ ಸಿಗ್ನಲ್ ವೃತ್ತದಲ್ಲಿ ರಸ್ತೆ ಮಧ್ಯೆ ಶಾಶ್ವತ ಬ್ಯಾರಿಕೇಡ್‌ಗಳನ್ನು ಅಳವಡಿಸಿರುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ನಗರದ ಕರಾವಳಿ ಜಂಕ್ಷನ್, ಬಂಟ್ಸ್ ಹಾಸ್ಟೆಲ್ ಜಂಕ್ಷನ್, ಬಲ್ಮಠ ಜಂಕ್ಷನ್‌ಗಳಲ್ಲಿ ರಸ್ತೆ ವಿಭಜಕಗಳಿಗೆ ಕಬ್ಬಿಣದ ರೀಲಿಂಗ್ಸ್ ಹಾಕಲು ಒಂದು ತಿಂಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದರು.

ಈ ಜಂಕ್ಷನ್‌ಗಳಲ್ಲಿರುವ ಬಸ್ ನಿಲ್ದಾಣಗಳನ್ನು ಸಮೀಪದ ಜಗಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ನಗರದಲ್ಲಿ ಫುಟ್‌ಪಾತ್ ಅತಿಕ್ರಮಿಸಿದ ಅಂಗಡಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳ ಒತ್ತುವರಿಯನ್ನು ತೆರವುಗೊಳಿಸಬೇಕು. ಪದೇ ಪದೇ ಒತ್ತುವರಿ ತೆರವು ಕಾರ್ಯಾಚರಣೆ ಬದಲು ಶಾಶ್ವತವಾಗಿ ಕ್ರಮಕೈಗೊಳ್ಳುವಂತೆ ನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

*ಬೈಕಂಪಾಡಿ ಅಂಡರ್‌ಪಾಸ್ : ರಾಷ್ಟ್ರೀಯ ಹೆದ್ದಾರಿ ಬೈಕಂಪಾಡಿಯ-ಜೋಕಟ್ಟೆ ಕ್ರಾಸ್ ಬಳಿ ವಾಹನ ಗಳು ಕೈಗಾರಿಕಾ ಪ್ರದೇಶಕ್ಕೆ ತಿರುವು ಪಡೆಯಲು ಅಂಡರ್‌ಪಾಸ್ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ರಾ.ಹೆ. ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೆದ್ ಅಬ್ದುಲ್ಲಾ ತಿಳಿಸಿದರು.

*ಕೂಳೂರು-ಬೈಕಂಪಾಡಿ ರಸ್ತೆ, ಪಣಂಬೂರ್ ಬೀಚ್ ಮತ್ತು ತಣ್ಣೀರುಬಾವಿ ರಸ್ತೆಯಲ್ಲಿ ಮತ್ತು ಟ್ರಕ್, ಲಾರಿಗಳ ಪಾಕಿರ್ಂಗ್‌ನಿಂದ ಸಂಚಾರ ವ್ಯವಸ್ಥೆಗೆ ಅಡಚಣೆ ಉಂಟಾಗುತ್ತಿರುವುದರಿಂದ ಎನ್‌ಎಂಪಿಎ ವತಿಯಿಂದ ಪ್ರಾಧಿಕಾರದ ಜಮೀನಿನಲ್ಲಿ ಟ್ರಕ್ ನಿಲುಗಡೆಗೆ ಸ್ಥಳಾವಕಾಶ ಒದಗಿಸುವ ಬಗ್ಗೆ ಚರ್ಚಿಸುವು ದಾಗಿ ಜಿಲ್ಲಾಧಿಕಾರಿ ದರ್ಶನ್ ತಿಳಿಸಿದರು.

ಬೈಕಂಪಾಡಿಯಿಂದ ಸುರತ್ಕಲ್‌ವರೆಗೆ ಹೆದ್ದಾರಿ ದಾರಿದೀಪ ಸಮಸ್ಯೆ ಇದೆ. ಇದನ್ನು ಸುವ್ಯವಸ್ಥಿತವಾಗಿ ನಿರ್ವಹಿಸುವಂತೆ ನಗರ ಪಾಲಿಕೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

*ಮಂಗಳೂರು ನಗರ ವ್ಯಾಪ್ತಿಯ ಎಲ್ಲಾ 4 ಸಂಚಾರ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ತಮ್ಮ ವ್ಯಾಪ್ತಿಯ ಪ್ರಮುಖ ಟ್ರಾಫಿಕ್ ಸಮಸ್ಯೆಗಳು ಮತ್ತು ಅವುಗಳ ಪರಿಹಾರದ ಬಗ್ಗೆ ಜಂಟಿಯಾಗಿ ಚರ್ಚಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

*ಶಾಲಾ ಬಸ್ ಮತ್ತು ವಾಹನಗಳಲ್ಲಿ ಅಧಿಕ ಮಕ್ಕಳನ್ನು ಸಾಗಿಸುವುದರ ಬಗ್ಗೆ ದೂರುಗಳು ಬಂದಿದೆ. ಶಾಲಾ ವಾಹನಗಳಲ್ಲಿ ಎಷ್ಟು ಮಕ್ಕಳು ಸಂಚರಿಸುತ್ತಿದ್ದಾರೆ ಎಂಬುದರ ಬಗ್ಗೆ ಆಯಾಯ ಶಾಲೆಗಳಿಂದ ವರದಿ ಪಡೆಯಬೇಕು. ಜಲಜೀವನ್ ಮಿಷನ್ ಪೈಪ್‌ಲೈನ್ ಕಾಮಗಾರಿಯಲ್ಲಿ ಲೋಕೋಪಯೋಗಿ ರಸ್ತೆ ಗಳಿಗೆ ಅಡಚಣೆಯಾಗಿದೆ. ಹಾಗಾಗಿ ಸಂಬಂಧಪಟ್ಟವರಿಗೆ ದಂಡ ವಿಧಿಸುವಂತೆ ಜಿಲ್ಲಾಧಿಕಾರಿ ದರ್ಶನ್ ಸೂಚಿಸಿದರು.

*ನಗರದಲ್ಲಿ ಟಿಂಟೆಡ್ ಗ್ಲಾಸ್ ಹೊಂದಿರುವ ವಾಹನಗಳ ನಿಯಂತ್ರಿಸಲು ಕಾರ್ಯಾಚರಣೆ ನಡೆಯುತ್ತಿದೆ. ಈ ಬಗ್ಗೆ ಕಾರ್ ಟಿಂಟ್‌ಗಳನ್ನು ತೆಗೆದು ದಂಡ ವಿಧಿಸಲಾಗುತ್ತದೆ. ವಾಹನಗಳಿಗೆ ಟಿಂಟ್ ಹಾಕದಂತೆ ವಾಹನ ಶೋರೂಂಗಳಿಗೆ ಮತ್ತು ವಾಹನ ಅಲಂಕಾರ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಟಿಂಟೆಡ್ ಗ್ಲಾಸ್ ಹೊಂದಿರುವ ಕಾರ್‌ನಲ್ಲಿ ಅಪರಾಧ ನಡೆದರೆ ಟಿಂಟ್ ಹಾಕಿದ ಸಂಸ್ಥೆಯನ್ನು ಕೂಡಾ ಆ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗುವುದು ಎಂದು ಡಿಸಿಪಿ ಎಚ್ಚರಿಸಿದರು.

ಸಭೆಯಲ್ಲಿ ಪೋಲಿಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ನಾಯ್ಕ, ಮಂಗಳೂರು ಉಪ ವಿಭಾಗಾಧಿಕಾರಿ ಹಷರ್ವರ್ಧನ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಮಿತಿ ಸದಸ್ಯ ಗೋಪಾಲಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News