ದ.ಕ ಜಿಲ್ಲೆಯ ಹೆಸರು ಬದಲಾವಣೆ ವಿರೋಧಿಸಿ ಸಿಪಿಐಎಂಎಲ್ ಲಿಬರೇಶನ್‌ನಿಂದ ಮನವಿ
ಮಂಗಳೂರು: ದ.ಕ.ಜಿಲ್ಲೆಯ ಹೆಸರನ್ನು ’ಮಂಗಳೂರು’ ಎಂದು ಬದಲಾವಣೆ ಮಾಡುವ ಪ್ರಸ್ತಾಪದ ವಿರುದ್ಧ ಸಿಪಿಐಎಂಎಲ್ ಲಿಬರೇಶನ್ ವತಿಯಿಂದ ಜಿಲ್ಲಾಧಿಕಾರಿಯ ಮೂಲಕ ಮುಖ್ಯಮಂತ್ರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಹೆಸರು ಬದಲಾವಣೆ ಮಾಡುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಬೆಳ್ತಂಗಡಿ, ಕಡಬ,ಬಂಟ್ವಾಳ, ಪುತ್ತೂರು, ಉಳ್ಳಾಲ, ಮೂಲ್ಕಿ ಮೂಡುಬಿದಿರೆ ತಾಲೂಕುಗಳ ಅಭಿವೃದ್ಧಿಯ ಮೇಲೆ ನೇರ ಪರಿಣಾಮ ಬೀಳಲಿದೆ. ಈಗಾಗಲೇ ಈ ತಾಲೂಕುಗಳು ರಾಜಕೀಯವಾಗಿ, ಆರ್ಥಿಕವಾಗಿ ಅವಕಾಶದಿಂದ ವಂಚಿತ ವಾಗಿದೆ. ಈ ತಾಲೂಕುಗಳು ಜಿಲ್ಲಾ ಕೇಂದ್ರದಿಂದ ದೂರವಿರುವ ಕಾರಣ ಮಂಗಳೂರು ಜಿಲ್ಲೆ ಎಂದು ನಾಮಕರಣವಾದರೆ ಮತ್ತಷ್ಟು ಅವಕಾಶಗಳಿಂದ ವಂಚಿತವಾಗುವ ಸಂಭವವಿದೆ. ದ.ಕ. ಜಿಲ್ಲೆಯು ಬಹುಸಂಸ್ಕೃತಿಯ ನಾಡಾಗಿದೆ. ಮಂಗಳೂರಿನ ತುಳು ಭಾಷೆ, ಸಂಸ್ಕೃತಿಗೂ ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ, ಬಂಟ್ಬಾಳದ ತುಳು ಭಾಷೆ ಮತ್ತು ಸಂಸ್ಕೃತಿ ಇನ್ನಿತರ ಆಚರಣೆಗಳಿಗೂ ವ್ಯತ್ಯಾಸ ಗಳಿವೆ. ಈ ಬಹು ಸಂಸ್ಕೃತಿಯ ಮೇಲೆ ಏಕಮುಖ ಸಂಸ್ಕೃತಿಯು ಪರಿಣಾಮ ಬೀರಲಿದೆ. ತುಳುನಾಡು ಎನ್ನುವುದನ್ನು ಮುಂದಿಟ್ಟು ನಡೆಯುತ್ತಿರುವ ಮಂಗಳೂರು ಜಿಲ್ಲಾ ಅಭಿಯಾನವು ತುಳುನಾಡಿನ ಬಹು ಸಂಸ್ಕೃತಿಗೆ ವಿರೋಧ ವಾಗಿರುವ ಅಭಿಯಾನವಾಗಿದೆ. ಜಿಲ್ಲೆಯು ಬ್ಯಾರಿ, ಕೊಂಕಣಿ, ಕನ್ನಡ ಸಹಿತ ಬಹುಭಾಷೆಗಳಿಂದ ರೂಪಿತವಾದ ಪ್ರದೇಶವಾಗಿದೆ. ಇದನ್ನು ಬದಿಗಿಟ್ಟು ಕೇವಲ ತುಳುವನ್ನು ಕೇಂದ್ರೀ ಕರಿಸಿ ಅಭಿಯಾನ ನಡೆಯುತ್ತಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ ಲೆನಿವಾದಿ) ಲಿಬರೇಶನ್ ದ.ಕ.ಜಿಲ್ಲಾ ಸಮಿತಿಯು ಅಪರ ಜಿಲ್ಲಾಧಿಕಾರಿಯ ಮೂಲಕ ನೀಡಿದ ಮನವಿಯಲ್ಲಿ ತಿಳಿಸಲಾಗಿದೆ.
ಸಿಪಿಐಎಂಎಲ್ ಲಿಬರೇಶನ್‌ನ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ, ರಾಜ್ಯ ಸಮಿತಿ ಸದಸ್ಯ ಮೋಹನ್ ಕೆ.ಇ, ಜಿಲ್ಲಾ ಸಮಿತಿ ಸದಸ್ಯರಾದ ರಾಜಾ ಚೆಂಡ್ತಿಮಾರ್, ಸಜೇಶ್ ವಿಟ್ಲ, ಬಂಟ್ವಾಳ ತಾಲೂಕು ಸಮಿತಿಯ ಮುಖಂಡರಾದ ಅಚ್ಯುತ ಕಟ್ಟೆ, ಲಿಯಕತ್ ಖಾನ್, ಮಂಗಳೂರು ತಾಲೂಕು ಮುಖಂಡರಾದ ಮುಹಮ್ಮದ್ ಝಿಲಾನಿ ನಿಯೋಗದಲ್ಲಿದ್ದರು.