×
Ad

ಪಿನ್ ಕೋಡ್ ಸಮಸ್ಯೆಗಳನ್ನು ಸರಿಪಡಿಸಲು ಡಿವೈಎಫ್ಐ ಒತ್ತಾಯ

Update: 2025-07-23 00:00 IST

ಮಂಗಳೂರು: ಉಳ್ಳಾಲ ತಾಲ್ಲೂಕು ರಚನೆಯಾದ ಬಳಿಕ ತಾಲ್ಲೂಕಿನ ವಿವಿಧೆಡೆ ಪಿನ್ ಕೋಡ್ ಸಮಸ್ಯೆಗಳು ಉಂಟಾಗಿದ್ದು, ಇವುಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಡಿವೈಎಫ್ಐ ಮೊಂಟೆಪದವು ಘಟಕ ಉಳ್ಳಾಲ ತಾಲ್ಲೂಕು ತಹಶೀಲ್ದಾರರಿಗೆ ಮನವಿ ಸಲ್ಲಿಸಿತು.

ನರಿಂಗಾನ ಗ್ರಾಮಕ್ಕೆ ಒಳಪಟ್ಟ ಪಿನ್ ಕೋಡ್ ಸಮಸ್ಯೆಗಳು ಕಳೆದ ಕೆಲವು ವರ್ಷಗಳಿಂದ ಕಾಡುತ್ತಿದ್ದು, ಉಳ್ಳಾಲ ತಾಲ್ಲೂಕು ರಚನೆಯಾದ ಬಳಿಕ ಪ್ರಸ್ತುತ ಇರುವ ಪಿನ್ ಕೋಡ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅಂಚೆ ಮೂಲಕ ಅಥವಾ ಬೇರೆ ರೀತಿಯ ಪತ್ರ ರವಾನೆ ಹಾಗೂ ಇತರೆ ವಹಿವಾಟುಗಳಿಗೆ ಸದರಿ ಪಿನ್ ಕೋಡ್ ಬಳಸಿದರೆ ಯಥಾತ್ ಪ್ರದೇಶ ಅಥವಾ ವಿಳಾಸ ಹೊರತು ಪಡಿಸಿ ಬೇರೆ ಬೇರೆ ಪ್ರದೇಶಗಳಿಗೆ / ಅಂಚೆ ಕಛೇರಿಗಳಿಗೆ (ಇತರ ಪಿನ್ ಕೋಡ್ ವ್ಯಾಪ್ತಿಗಳಿಗೆ) ಹೋಗಿ ತುಂಬಾ ತಡವಾಗಿ ಬರುತ್ತಿರುತ್ತವೆ. ಅಲ್ಲದೇ ಸ್ಥಳೀಯ ಅಂಚೆಪೇದೆಗಳನ್ನು ನಿರಂತರ ಸಂಪರ್ಕಿಸಬೇಕಾದ ಪರಿಸ್ಥಿತಿಯೂ ಉಂಟಾಗುತ್ತದೆ. ಇದರಿಂದ ಈ ಪ್ರದೇಶದ ಜನರಿಗೆ ಅಂಚೆ ವ್ಯವಸ್ಥೆಯು ಇದ್ದೂ ಇಲ್ಲದಂತಾಗಿರುತ್ತದೆ ಎಂದು ಡಿವೈಎಫ್ಐ ಆರೋಪಿಸಿದೆ.

ಅಲ್ಲದೇ ಇಲ್ಲಿ ಸ್ಥಳೀಯವಾಗಿ ಆಧಾರ್ ಆಧುನೀಕರಿಸಲು (ಅಪ್ಡೇಟ್) ಕೂಡಾ ಸಾಧ್ಯವಾಗುತ್ತಿಲ್ಲ. ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಸಾರ್ವಜನಿಕರು ತಾಲ್ಲೂಕು ಕಛೇರಿಗೆ ತೆರಳಿ ವಿಚಾರಿಸಿದರೆ ತಾಲ್ಲೂಕು ಕಛೇರಿಯಲ್ಲೂ ಅಪ್ಡೇಟ್ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ಉತ್ತರ ಸಿಗುತ್ತವೆ. ಈವೆಲ್ಲ ವಿಷಯಗಳನ್ನು ಸ್ಥಳೀಯ ಗ್ರಾಮ ಪಂಚಾಯತ್ ಸಭೆಗಳಲ್ಲೂ ಪ್ರಸ್ತಾಪಿಸಿ ಚರ್ಚಗೆ ಒಳಪಡಿಸಿದ್ದರೂ, ಇನ್ನು ಕೂಡಾ ಈ ಸಮಸ್ಯೆಗಳನ್ನು ಸರಿಪಡಿಸಲು ಯಾವುದೇ ಅಧಿಕಾರಿಯೂ ಕೂಡಾ ಮುಂದೆ ಬಂದಿರುವುದಿಲ್ಲ. ಉಳ್ಳಾಲ ತಾಲ್ಲೂಕು ರಚನೆಯಾಗುವ ಮುಂಚೆ ಈ ಸಮಸ್ಯೆಗಳಿಲ್ಲದಿದ್ದೂ, ಕೆಲವು ಸಮಯಗಳಿಂದ ಪ್ರಸ್ತುತ ಸಮಸ್ಯೆಗಳಿಂದ ಸಾರ್ವಜನಿಕರು ತೊಂದರೆಗೀಡಾಗುತ್ತಿದ್ದಾರೆ ಎಂದು ಮನವಿಯಲ್ಲಿ ದೂರಿದೆ.

ಡಿವೈಎಫ್ಐ ನಿಯೋಗದಲ್ಲಿ ಮುಖಂಡರಾದ ರಝಾಕ್ ಮೊಂಟೆಪದವು, ಸಿರಾಜ್ ಬಿ.ಎಮ್, ಶಫೀಕ್ ಮರಿಕ್ಕಳ, ಶಾಹಿದ್ ಮೊಂಟೆಪದವು ಇತರರಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News