×
Ad

ಸುರತ್ಕಲ್ ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಆಗ್ರಹಿಸಿ ಧರಣಿ

Update: 2025-12-01 23:34 IST

ಸುರತ್ಕಲ್: ಸುರತ್ಕಲ್ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿ ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಬೇಕು ಮತ್ತು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಮತ್ತು ಜಯದೇವ ಹೃದ್ರೋಗ ಆಸ್ಪತ್ರೆಯ ಘಟಕ ಮಂಗಳೂರಿನಲ್ಲಿ ಆರಂಭಿಸುವಂತೆ ಆಗ್ರಹಿಸಿ ಸರಕಾರಿ ಆಸ್ಪತ್ರೆ ಉಳಿಸಿ ಸಮಿತಿಯು ಸೋಮವಾರ 12 ತಾಸುಗಳ ಸಾಮೂಹಿಕ ಧರಣಿ ನಡೆಸಿತು.

ಧರಣಿಯನ್ನು ಸರಕಾರಿ ಆಸ್ಪತ್ರೆ ಉಳಿಸಿ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಉದ್ಘಾಟಿಸಿ ಮಾತನಾಡಿದರು.

ಸುರತ್ಕಲ್ ಸರಕಾರಿ ಆಸ್ಪತ್ರೆಯನ್ನು 40 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕು. ಇದಕ್ಕೆ ಈ ತಿಂಗಾಂತ್ಯದೊಳಗೆ ಶಿಲಾನ್ಯಾಸ ನೆರವೇರಿಸಿ ಕಾಮಗಾರಿ ಆರಂಭಿಸಬೇಕು ಎಂದು ಧರಣಿನಿರತರು ಒತ್ತಾಯಿಸಿದರು.

ಆರೋಗ್ಯ ಇಲಾಖೆಯ ಅಧಿಕಾರಿಗಳ ಭೇಟಿ, ಮನವಿ ಸ್ವೀಕಾರ

ಧರಣಿ ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿ ಡಾ.ಸುಜಯ ಭಂಡಾರಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಮನವಿ ಸ್ವೀಕರಿಸಿತು.

ಬಳಿಕ ಮಾತನಾಡಿದ ಡಾ.ಸುಜಯ ಭಂಡಾರಿ, ಈ ಹಿಂದೆ ಹಲವು ಭಾರಿ ನಡೆದಿರುವ ಹೋರಾಟಗಳ ಸಂದರ್ಭ ನೀಡಿರುವ ಮನವಿಯ ಆಧಾರದಲ್ಲಿ ಸಮುದಾಯ ಆಸ್ಪತ್ರೆ ಸ್ಥಾಪನೆಯ ಪ್ರಸ್ತಾವವನ್ನು ವಿವಿಧ ಸಂದರ್ಭದಲ್ಲಿ ಆರೋಗ್ಯ ಇಲಾಖೆಗೆ ಕಳುಹಿಸಲಾಗಿದೆ. ಇದೀಗ ನಿಮ್ಮ ಮನವಿಯ ಆಧಾರದಲ್ಲಿ ಮತ್ತೊಮ್ಮೆ ಬೇಡಿಕೆಗಳನ್ನು ಮುಂದಿಟ್ಟು ಇಲಾಖೆಗೆ ಕಳುಹಿಸಿ ಕೊಡುವುದಾಗಿ ಭರವಸೆ ನೀಡಿದರು.

ಧರಣಿಯಲ್ಲಿ ಸದಾಶಿವ ಪಡುಬಿದ್ರೆ, ಹಿರಿಯ ರಂಗಭೂಮಿ ಕಲಾವಿದೆ ಗೀತಾ ಸುರತ್ಕಲ್, ದಸಂಸ ಮುಖಂಡರಾದ ಕೃಷ್ಣಾನಂದ ಡಿ., ರಘು ಎಕ್ಕಾರು ಹಾಗೂ ಬಿ.ಕೆ.ಇಮ್ತಿಯಾಝ್, ರಾಘವೇಂದ್ರ ರಾವ್, ರಮೇಶ್ ಟಿ.ಎನ್., ಮೊಯ್ದಿನಬ್ಬ ಪಕ್ಷಿಕೆರೆ ಮತ್ತಿತರರು ಭಾಗವಹಿಸಿದ್ದರು.








 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News