×
Ad

ಪುತ್ತೂರು | ಜಡ್ಜ್ ಎದುರಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ : ಆಸ್ಪತ್ರೆಗೆ ದಾಖಲು

Update: 2026-01-22 15:25 IST

 ಸಾಂದರ್ಭಿಕ ಚಿತ್ರ

ಪುತ್ತೂರು: ಜಡ್ಜ್ ಎದುರಲ್ಲೇ ವ್ಯಕ್ತಿಯೊರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ಮಧ್ಯಾಹ್ನ ಪುತ್ತೂರಿನ 5ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದವರನ್ನು ಪುತ್ತೂರು ತಾಲೂಕಿನ ಕಾವು ಮಾನ್ಯಡ್ಕ ನಿವಾಸಿ ರವಿ (35) ಎಂದು ಗುರುತಿಸಲಾಗಿದೆ.

ರವಿ ಮತ್ತು ಆತನ ಪತ್ನಿ ವಿದ್ಯಾಶ್ರೀ ನಡುವೆ ಕಳೆದ ಕೆಲ ದಿನಗಳಿಂದ ಕಲಹ ನಡೆಯುತ್ತಿತ್ತು. ಎರಡು ದಿನಗಳ ಹಿಂದೆ ಪತ್ನಿಯ ಕುತ್ತಿಗೆ ಹಿಸುಕಿ ಕೊಲೆ ಯತ್ನ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಗಂಡ–ಹೆಂಡತಿ ನಡುವಿನ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬುಧವಾರ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಿಚ್ಛೇದನ ಸಂಬಂಧ ಮಾತುಕತೆ ಕೂಡ ನಡೆದಿತ್ತು. ಠಾಣೆಗೆ ಹಾಜರಾಗುವಂತೆ ಪೊಲೀಸರು ರವಿಗೆ ಸೂಚನೆ ನೀಡಿದ್ದರು.

ಈ ಮಧ್ಯೆ ರವಿ ನೇರವಾಗಿ ಪುತ್ತೂರು ನ್ಯಾಯಾಲಯದ ಆವರಣಕ್ಕೆ ಆಗಮಿಸಿ, 5ನೇ ಹೆಚ್ಚುವರಿ ನ್ಯಾಯಾಲಯದ ಜಡ್ಜ್ ಎದುರಲ್ಲಿಯೇ ವಿಷ ಸೇವಿಸಿದ್ದಾನೆ. ರವಿ ವಿಷ ಸೇವಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಇದ್ದುದರಿಂದ ನ್ಯಾಯಾಧೀಶರು ಮುಂಚಿತವಾಗಿಯೇ ನ್ಯಾಯಾಲಯದ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದರು ಎಂದು ತಿಳಿದುಬಂದಿದೆ.

ವಿಷ ಸೇವಿಸಿದ ಬಳಿಕ ರವಿ ನ್ಯಾಯಾಲಯದ ಆವರಣದಲ್ಲೇ ವಾಂತಿ ಮಾಡಿದ್ದು, ತಕ್ಷಣ ಎಚ್ಚೆತ್ತ ಸಿಬ್ಬಂದಿ ಹಾಗೂ ಸಾರ್ವಜನಿಕರು ಆತನನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಗೇರು ತೋಟದಲ್ಲಿ ಸಿಂಪಡಣೆಗೆ ಬಳಸುವ, ಎಂಡೋಸಲ್ಫಾನ್ ನಿಷೇಧದ ಬಳಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ‘ಕರಾಟೆ’ ಎಂಬ ಕೀಟನಾಶಕವನ್ನು ರವಿ ಸೇವಿಸಿದ್ದಾನೆ ಎನ್ನಲಾಗಿದೆ.

ಆತನ ಆರೋಗ್ಯ ಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನಿಂದ ಮಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆತ್ಮಹತ್ಯೆ ಯತ್ನದ ಬಳಿಕ ದಂಪತಿ ಒಂದಾಗಿ, ಮಂಗಳೂರು ಆಸ್ಪತ್ರೆಗೆ ಸಾಗುವ ವೇಳೆ ಒಂದೇ ಆಂಬ್ಯುಲೆನ್ಸ್‌ನಲ್ಲಿ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News