×
Ad

ಕಾಸರಗೋಡು-ಮಂಗಳೂರು KSRTC ಪ್ರಯಾಣಿಕರಿಗೆ ಟೋಲ್ ಬಿಸಿ : ಬಸ್ ದರ 7 ರೂ.ಗೆ ಹೆಚ್ಚಳ

Update: 2026-01-22 11:51 IST

ಕಾಸರಗೋಡು: ಕುಂಬಳೆ ಅರಿಕ್ಕಾಡಿಯಲ್ಲಿ ಟೋಲ್ ಸಂಗ್ರಹ ಆರಂಭವಾದ ಹಿನ್ನೆಲೆಯಲ್ಲಿ, ಕಾಸರಗೋಡು-ಮಂಗಳೂರು ನಡುವೆ ಸಂಚರಿಸುವ ಕರ್ನಾಟಕ ಸಾರಿಗೆ (KSRTC) ಬಸ್ ದರವನ್ನು ಹೆಚ್ಚಿಸಲಾಗಿದ್ದು, ಪ್ರಯಾಣಿಕರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.

ಅಂತರರಾಜ್ಯ ಹೆದ್ದಾರಿಯ ಟೋಲ್ ಬೂತ್ ಮೂಲಕ ಹಾದುಹೋಗುವ ಪ್ರತಿ ಪ್ರಯಾಣಿಕರು ಈಗ ಮೂಲ ದರಕ್ಕಿಂತ ಹೆಚ್ಚುವರಿಯಾಗಿ 7 ರೂಪಾಯಿ ಪಾವತಿಸಬೇಕಾಗುತ್ತದೆ. ಈವರೆಗೆ ಕಾಸರಗೋಡಿನಿಂದ ಮಂಗಳೂರಿಗೆ 81 ರೂಪಾಯಿ ಇದ್ದ ಟಿಕೆಟ್ ದರವು ಇದೀಗ 88 ರೂಪಾಯಿಗಳಿಗೆ ಏರಿಕೆಯಾಗಿದೆ. ವಿಶೇಷವೆಂದರೆ, ಟೋಲ್ ದಾಟಿದ ತಕ್ಷಣದ ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರೂ ಈ ಹೆಚ್ಚುವರಿ ದರವನ್ನು ಭರಿಸಬೇಕಿದೆ.

ಕುಂಬಳೆಯಲ್ಲಿ ಟೋಲ್ ಸಂಗ್ರಹ ಆರಂಭವಾದ ಕಾರಣ ಅನಿವಾರ್ಯವಾಗಿ ದರ ಹೆಚ್ಚಿಸಲಾಗಿದೆ ಎಂದು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸ್ಪಷ್ಟಪಡಿಸಿದೆ. "ಒಂದು ಬಸ್ ಕಾಸರಗೋಡಿನಿಂದ ಮಂಗಳೂರಿಗೆ ಹೋಗುವಾಗ ಪ್ರತಿ ಬಾರಿ ಸುಮಾರು 220 ರೂಪಾಯಿ ಟೋಲ್ ಪಾವತಿಸಬೇಕಾಗುತ್ತದೆ. ಈ ಹೊರೆಯನ್ನು ಸರಿದೂಗಿಸಲು ದರ ಏರಿಕೆ ಮಾಡಲಾಗಿದೆ" ಎಂಬುದು ಅಧಿಕಾರಿಗಳ ವಾದವಾಗಿದೆ. ಪ್ರಸ್ತುತ ಕರ್ನಾಟಕದ 43 ಬಸ್‌ಗಳು ಈ ಮಾರ್ಗದಲ್ಲಿ ದಿನಕ್ಕೆ ತಲಾ ಏಳು ಬಾರಿ ಸಂಚರಿಸುತ್ತಿವೆ.

ಕಾಸರಗೋಡಿನ ಬಹುತೇಕ ಜನರು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಮಂಗಳೂರನ್ನು ಅವಲಂಬಿಸಿದ್ದು, ಕರ್ನಾಟಕದ ಬಸ್‌ಗಳಲ್ಲೇ ಹೆಚ್ಚು ಸಂಚರಿಸುತ್ತಾರೆ. ಏಕಾಏಕಿ ದರ ಏರಿಕೆಯಾಗಿರುವುದು ದಿನನಿತ್ಯದ ಪ್ರಯಾಣಿಕರಲ್ಲಿ ತೀವ್ರ ನಿರಾಸೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News