×
Ad

ಸುರತ್ಕಲ್ | ಹಿಂದುತ್ವ ಮುಖಂಡನ ವಿರುದ್ಧ ಪಡ್ರೆ ಜುಮಾದಿ ದೈವದ ಚಿನ್ನ ಕಳ್ಳತನ ಆರೋಪ; ಎಫ್ಐಆರ್ ದಾಖಲು

Update: 2025-07-27 16:21 IST

ಹಿಂದುತ್ವ ನಾಯಕ ಸತೀಶ್ ಮುಂಚೂರು

ಮಂಗಳೂರು: ಸುರತ್ಕಲ್ ನ ಹಿಂದುತ್ವ ನಾಯಕ ಸತೀಶ್ ಮುಂಚೂರು ಮತ್ತು ಇತರರ ವಿರುದ್ದ ಪಡ್ರೆ ಧೂಮವತಿ ದೈವಸ್ಥಾನದ ಬಂಗಾರ ಮತ್ತು ಹಣ ಕಳ್ಳತನ ಮಾಡಿದ ದೂರು ದಾಖಲಾಗಿದ್ದು, ಸುರತ್ಕಲ್ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಸತೀಶ್ ಮುಂಚೂರು ಮತ್ತು ದಿನಕರ್ ಶೆಟ್ಟಿ ಸೇರಿದಂತೆ ಇತರರು ಸುರತ್ಕಲ್ ಪಡ್ರೆ ಜುಮಾದಿ ದೈವಸ್ಥಾನಕ್ಕೆ ನುಗ್ಗಿ ಭಕ್ತರಿಂದ ಸಂಗ್ರಹವಾದ ಹಣ, ಚಿನ್ನ, ಬೆಳ್ಳಿಯನ್ನು ಕಳ್ಳತನ ಮಾಡಿ ಬಳಕೆ ಮಾಡಿದ್ದಾರೆ ಎಂದು ಪಡ್ರೆ ಜುಮಾದಿ ದೈವಸ್ಥಾನದ ಉಪಾಧ್ಯಕ್ಷ ಪದ್ಮನಾಭ ಶೆಟ್ಟಿಯವರು ನ್ಯಾಯಾಲಯಕ್ಕೆ ದೂರು ನೀಡಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಫ್ಐಆರ್ ನಲ್ಲಿ, ಪೊಲೀಸ್ ಅಧಿಕಾರಿಯಾಗಿರುವ ದಿನಕರ್ ಶೆಟ್ಟಿ, ಬಾಬು ಭಂಡಾರಿ, ಲೋಕಯ್ಯ ಶೆಟ್ಟಿ, ಯೋಗೀಶ್ ಕೊಂಕಣಬೈಲ್, ಅಪೇಕ್ಷ ಶೆಟ್ಟಿ, ರವಿರಾಜ್ ಸುವರ್ಣ, ರಮಾನಾಥ್ ಅಮೀನ್, ಲತೀಶ್ ಶೆಟ್ಟಿ, ಮುಖೇಶ್ ಶೆಟ್ಟಿ, ಸ್ವಪ್ನ, ಸುನೀಲ್, ಸತೀಶ್ ಮುಂಚೂರು, ರಾಜೇಶ್ ರವರುಗಳನ್ನು ಪಡ್ರೆ ದೈವಸ್ಥಾನದ ಹಣ, ಬಂಗಾರ ಕಳ್ಳತನದ ಆರೋಪಿಗಳೆಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ದ ಬಿಎನ್ ಎಸ್ 303, 314, 316, 318, 319, 336, 315 ಸೆಕ್ಷನ್ ಗಳಡಿಯಲ್ಲಿ ಕ್ರೈಂ ನಂಬರ್ 94/2025 ದಾಖಲಾಗಿದೆ.

ಸುರತ್ಕಲ್ ನ ಪಡ್ರೆ ಜುಮಾದಿ ದೈವಸ್ಥಾನವು ಇತಿಹಾಸ ಪ್ರಸಿದ್ದ ದೇಗುಲವಾಗಿದೆ. ಈ ದೈವಸ್ಥಾನದ ನಿರ್ವಹಣೆಗೆ ಆಡಳಿತ ಸಮಿತಿ ಇದೆ. ಆಡಳಿತ ಸಮಿತಿಯಲ್ಲಿ ಪೂರ್ಣಪ್ರಮಾಣದ ಸದಸ್ಯರಿದ್ದು, ದೈವಸ್ಥಾನಕ್ಕೆ ಬಂದ ಹಣ, ಚಿನ್ನ, ಬೆಳ್ಳಿಯನ್ನು ಯೂನಿಯನ್ ಬ್ಯಾಂಕ್ ನ ಲಾಕರ್‌ನಲ್ಲಿ ಇಡಲಾಗುತ್ತದೆ.

ಪಡ್ರೆ ಜುಮಾದಿ ದೈವಸ್ಥಾನದ 2025 ರ ವಾರ್ಷಿಕ ಜಾತ್ರೆಯು ಮಾರ್ಚ್ 13 ರಿಂದ 15 ರ ತನಕ ನಡೆದಿತ್ತು. ಈ ವೇಳೆ ಜುಮಾದಿ ದೈವದ ಹಣ, ಚಿನ್ನ, ಬೆಳ್ಳಿಯನ್ನು ಲಾಕರ್ ನಿಂದ ತೆಗೆದು ದೈವಸ್ಥಾನಕ್ಕೆ ತರಲಾಗಿತ್ತು. ಈ ರೀತಿ ದೈವಸ್ಥಾನಕ್ಕೆ ತಂದ ಜುಮಾದಿ ದೈವದ ಚಿನ್ನ, ಬೆಳ್ಳಿಯನ್ನು ಆರೋಪಿಗಳಾದ ದಿನಕರ್ ಶೆಟ್ಟಿ, ಹಿಂದುತ್ವ ನಾಯಕ ಸತೀಶ್ ಮುಂಚೂರು ಮತ್ತು ಇತರರು ಅಕ್ರಮವಾಗಿ ಸ್ವಾಧೀನ ಮಾಡಿಕೊಂಡು, ಬ್ಯಾಂಕ್ ಲಾಕರ್ ಗೆ ಜಮಾ ಮಾಡದೇ ವಂಚಿಸಿದ್ದಾರೆ ಎಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ.

ದೈವಸ್ಥಾನದ ಆಡಳಿತ ಮಂಡಳಿಯ ವಿವಾದ ಸಿವಿಲ್ ನ್ಯಾಯಾಲಯದಲ್ಲಿ ಓ.ಎಸ್ ನಂ. 1171/2024 ಮತ್ತು ಒಎಸ್ 452/2025 ವಿಚಾರಣೆಯಲ್ಲಿದೆ. ಒಎಸ್ ಸಿವಿಲ್ ಕೇಸ್ ವಿಚಾರಣೆಯಲ್ಲಿ ಇರುವಾಗ ಹೊಸ ಸಮಿತಿ ರಚನೆ ಮಾಡಬಾರದು ಎಂದು ಆದೇಶವಿದ್ದರೂ ದಿನಕರ್ ಶೆಟ್ಟಿ ತಾನೇ ಅಧ್ಯಕ್ಷನೆಂದು ಘೋಷಿಸಿಕೊಂಡು, ಊರು ಮತ್ತು ದೈವಸ್ಥಾನಕ್ಕೆ ಸಂಬಂಧಪಡದ ಸತೀಶ್ ಮುಂಚೂರು ಎಂಬಾತನ ಜೊತೆ ಸೇರಿಕೊಂಡು ಹಣ, ಚಿನ್ನಾಭರಣ ಲಪಟಾಯಿಸಿದ್ದಾರೆ ಎಂದು ದೂರು ನೀಡಲಾಗಿದೆ.

ಹಿಂದುತ್ವ ನಾಯಕ ಎಂದು ಹೇಳಿಕೊಳ್ಳುವ ಸತೀಶ್ ಮುಂಚೂರು, ದಿನಕರ್ ಶೆಟ್ಟಿ ಮತ್ತು ಇತರರು ಪಡ್ರೆ ಜುಮಾದಿಗೆ ಸೇರಿದ ಅಂದಾಜು 8 ಲಕ್ಷ ರೂಗಳು, ಸುಮಾರು 15 ಪವನ್ ಚಿನ್ನವನ್ನು ಲಪಟಾಯಿಸಿದ್ದಾರೆ ಎಂದು ಎಫ್ಐಆರ್ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News