×
Ad

ಸುರತ್ಕಲ್: ಬೀದಿನಾಯಿಗಳ ದಾಳಿ; ಬಾಲಕಿಗೆ ಗಂಭೀರ ಗಾಯ

Update: 2025-10-15 22:07 IST

ಸುರತ್ಕಲ್: ಅಂಗಡಿಗೆ ಹೋಗಿದ್ದ ಬಾಲಕಿ ಮೇಲೆ ಬೀದಿನಾಯಿಗಳು ದಾಳಿ ಮಾಡಿದ ಪರಿಣಾಮ ಆಕೆ ಗಂಭೀರ ಗಾಯಗೊಂಡಿರುವ ಘಟನೆ ಬುಧವಾರ ಸಂಜೆ ಕಾನ ಮೈದಗುರಿಯಲ್ಲಿ ನಡೆದಿದೆ.

ಸುರತ್ಕಲ್‌ ಕಾನ ಮೈಂದಗುರಿ ನಿವಾಸಿ ಹೈದರ್ ಅಲಿ ಅವರ‌ ಮಗಳು ರಿದಾ ಫಾತಿಮ (9) ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿದು ಬಂದಿದೆ‌.

ರಿದಾ ಫಾತಿಮ ಸಂಜೆಯ ವೇಳೆ‌ ಮನೆ ಬಳಿಯ ಅಂಗಡಿಗೆ ಹೋಗುತ್ತಿದ್ದಳು. ಈ ವೇಳೆ ಎಲ್ಲಿಂದಲೋ ಜಗಳ ಮಾಡಿಕೊಂಡು ಬೀದಿನಾಯಿಗಳು ಅಲ್ಲಿಗೆ ಬಂದಿವೆ. ನಾಯಿಗಳ ಜಗಳ‌‌ ಕಂಡು ಬೆಚ್ಚಿಬಿದ್ದ ಬಾಲಕಿ ಮನೆಗೆ ಹಿಂದಿರುಗಿ ಓಡುವ ಭರದಲ್ಲಿ ಕೈಯ್ಯಲ್ಲಿದ್ದ ಹಣ ಕೆಳಗೆ ಬಿದ್ದಿದೆ. ಅದನ್ನು ಹೆಕ್ಕುವಷ್ಟರಲ್ಲಿ ನಾಯಿಗಳ‌ ಹಿಂಡು ಬಾಲಕಿಯ ಮೇಲೆ ದಾಳಿ ಮಾಡಿವೆ. ದಾಳಿಯಿಂದ ಬಾಲಕಿಯ ಕೈ, ಕಾಲಿಗೆ ಕಚ್ಚಿದ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಬಾಲಕಿಯ ಬೊಬ್ಬೆ ಕೇಳಿ ಸ್ಥಳಕ್ಕೆ ಬಂದ ಸಾರ್ವಜನಿಕರು ನಾಯಿಗಳ ಬಾಯಿಯಿಂದ ಬಾಲಕಿಯನ್ನು ರಕ್ಷಿಸಿ ಸುರತ್ಕಲ್‌ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಬಳಿಕ ನಗರದ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಬಳಿಕ ಅಲ್ಲಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಸಾರ್ವಜನಿಕರ ಆಕ್ರೋಶ:-

ಬೀದಿನಾಯಿ ದಾಳಿಯ ಬಗ್ಗೆ ಮಾಹಿತಿ ಹರಡಿದಾಕ್ಷಣ ಸ್ಥಳಕ್ಕೆ‌ಬಂದ ಸಾರ್ವಜನಿಕರು ಮಂಗಳೂರು ಮಹಾ ನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಬೀದಿನಾಯಿಗಳಿಗೆ ಕಡಿವಾಣ ಹಾಕಲು ಮನಪಾ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.‌

ಮನಪಾ ವಲಯ 1ರ ಸುರತ್ಕಲ್ ವ್ಯಾಪ್ತಿಯ ಎಲ್ಲೆಡೆ ಬೀದಿನಾಯಿಗಳು ಹೆಚ್ಚಳವಾಗುತ್ತಿದೆ‌. ಬೀದಿನಾಯಿಗಳು ಹಿರಿಯರು, ಮಹಿಳೆಯರು ಮಕ್ಕಳೆನ್ನದೆ ದಾಳಿ ಮಾಡುತ್ತಿದ್ದರೂ ಮನಪಾ ಅದರ ಕಡಿವಾಣಕ್ಕೆ ಯಾವುದೇ ಕನಿಷ್ಠ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೆನ್‌ಲಾಕ್ ನಲ್ಲಿ ತಕ್ಷಣಕ್ಕೆ ದೊರೆಯದ ಚಿಕಿತ್ಸೆ: ಆರೋಪ

ಮಗುವಿನ ಮೇಲೆ ಬೀದಿನಾಯಿಗಳು ದಾಳಿ ಮಾಡಿದ ಬಳಿಕ‌ ಸುರತ್ಕಲ್‌ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ವೆನ್ ಲಾಕ್ ಗೆ ಕರೆದೊಯ್ಯಲಾಗಿತ್ತು. ಈ ವೇಳೆ ಚಿಕಿತ್ಸೆ ನೀಡುವ ಬದಲು ಕಾಲಹರಣ ಮಾಡುತ್ತಿದ್ದರು. ಹಾಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಬೇಕಾಯಿತು ಎಂದು ಬಾಲಕಿಯ ಮಾವ ಮುಹಮ್ಮದ್ ಶರೀಫ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News