ಸುರತ್ಕಲ್ | ಡಿ.21ರಂದು ಉರುಮಾಲ್ ಮಾಸಪತ್ರಿಕೆಯ 21ನೇ ವಾರ್ಷಿಕೋತ್ಸವ, ಸಾಮೂಹಿಕ ವಿವಾಹ ಕಾರ್ಯಕ್ರಮ
ಸಾಂದರ್ಭಿಕ ಚಿತ್ರ
ಸುರತ್ಕಲ್ : ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬರುತ್ತಿರುವ ಉರುಮಾಲ್ ಮಾಸ ಪತ್ರಿಕೆಯ ಇಪ್ಪತ್ತನೇಯ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವು ಡಿ.21ರಂದು ಕಾಟಿಪಳ್ಳದ ಮಂಗಳಪೇಟೆ ಜಂಕ್ಷನ್‌ನಲ್ಲಿ ನಡೆಯಲಿದೆ.
ಪ್ರಸ್ತುತ ಕಾರ್ಯಕ್ರಮದಲ್ಲಿ ವಿವಾಹವಾಗುವ ವಧು-ವರರಿಗೆ ಚಿನ್ನಾಭರಣ ಹಾಗೂ ಬಟ್ಟೆಗಳನ್ನು ನೀಡಲಾಗುವುದು. ಸಮಾಜ ಸೇವಾ ಕಾರ್ಯಕ್ರಮದ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಿಧವಾ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವ ಕಾರ್ಯಕ್ರಮ ಹಾಗೂ ದಿವ್ಯಾಂಗರಿಗೆ ಅಗತ್ಯ ಉಪಕರಣಗಳನ್ನು ವಿತರಿಸಲಿದೆ. ಇದೇ ಸಂದರ್ಭ ರಾಜ್ಯ ಮಟ್ಟದ ಉರುಮಾಲ್ ಕ್ವಿಝ್ ಸ್ಪರ್ಧೆ ನಡೆಯಲಿದೆ.
ವಿಜೇತರಿಗೆ ಚಿನ್ನದ ಉಂಗುರ ಹಾಗೂ ಉರುಮಾಲ್ ಪ್ರಶಸ್ತಿ ನೀಡಲಾಗುವುದು. ರಾಜ್ಯಮಟ್ಟದಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಉರುಮಾಲ್ ಕಿಟ್ ನೀಡಿ ಗೌರವಿಸಲಾಗುವುದು. ರಾಜ್ಯಾದ್ಯಂತ 80 ರೇಂಜ್‌ಗಳಿಂದ ತಲಾ ಒಬ್ಬರಂತೆ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಪ್ರಸ್ತುತ ಕಾರ್ಯಕ್ರಮದಲ್ಲಿ ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಉರುಮಾಲ್ ಸಂಸ್ಥಾಪಕ ಸರ್ಫಾಝ್ ನವಾಝ್ ಮಂಗಳಪೇಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.