×
Ad

ಜಾರಿಗೊಂಡ ಸಂಹಿತೆಗಳು ಕಾರ್ಮಿಕರ ಪಾಲಿಗೆ ಮರಣ ಶಾಸನವಾಗಲಿದೆ: ಮೀನಾಕ್ಷಿ ಸುಂದರಂ

*ಕಾರ್ಮಿಕ ಸಂಹಿತೆಗಳ ವಿರುದ್ಧ ಜನಜಾಗೃತಿಯ ಸಮಾರೋಪ

Update: 2026-01-29 17:12 IST

ಮಂಗಳೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳು ಅತ್ಯಂತ ಅಪಾಯಕಾರಿಯಾಗಿದೆ. ಕಾರ್ಮಿಕ ವರ್ಗವನ್ನು ಮತ್ತೆ ಗುಲಾಮಗಿರಿಯತ್ತ ತಳ್ಳಲು ಸಂಚು ರೂಪಿಸಿದೆ. ಕಾರ್ಪೊರೇಟ್‌ಗಳ ಹಿತಾಸಕ್ತಿಗಳನ್ನು ಕಾಪಾಡಲು ಶ್ರಮಜೀವಿಗಳ ರಕ್ತ ಹೀರಲು ಸನ್ನದ್ಧವಾಗಿದೆ. ಹಾಗಾಗಿ ಜಾರಿ ಗೊಂಡ ಸಂಹಿತೆಗಳು ಕಾರ್ಮಿಕರ ಪಾಲಿಗಂತೂ ಮರಣ ಶಾಸನವಾಗಲಿದೆ ಎಂದು ಸಿಐಟಿಯು ಕರ್ನಾಟಕ ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂ ಆತಂಕ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕ ಸಂಹಿತೆಗಳ ವಿರುದ್ಧ ಜನಜಾಗೃತಿ ಮೂಡಿಸುವ ಸಲುವಾಗಿ ನಾಲ್ಕು ದಿನಗಳಿಂದ ದ.ಕ.ಜಿಲ್ಲೆಯಾದ್ಯಂತ ಸಂಚರಿಸಿದ ಪಾದಯಾತ್ರೆಯು ಗುರುವಾರ ನಗರದ ಹಂಪನಕಟ್ಟೆಯಲ್ಲಿ ಸಮಾಪನಗೊಂಡಿದ್ದು, ಅದರ ಭಾಗವಾಗಿ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೇಂದ್ರ ಸರಕಾರವು ಜನದ್ರೋಹಿ ಸಂಹಿತೆಗಳನ್ನು ಜಾರಿಗೊಳಿಸಿದರೆ ರಾಜ್ಯದ ಕಾಂಗ್ರೆಸ್ ಸರಕಾರ ಕೂಡ ಅದಕ್ಕೆ ಪೂರಕವಾಗಿ ಕರಡು ನಿಯಮಾವಳಿಗಳನ್ನು ರೂಪಿಸಲು ಹೊರಟಿರುವ ಮೂಲಕ ಕಾರ್ಮಿಕ ವರ್ಗದ ವಿರುದ್ಧ ದ್ವೇಷ ಸಾಧಿಸುವುದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ. ಬೀಜ ಮಸೂದೆ, ವಿದ್ಯುತ್ ಮಸೂದೆಗಳಂತಹ ಕರಾಳ ಶಾಸನಗಳನ್ನು ಜಾರಿಗೆ ತರುವ ಮೂಲಕ ರೈತಾಪಿ ಜನತೆಯ ಬದುಕನ್ನು ದುಸ್ತರಗೊಳಿಸಿದೆ. ಉದ್ಯೋಗ ಖಾತ್ರಿ ಯೋಜನೆಯ ಹಣಕಾಸಿನ ಹೊರೆಯನ್ನು ರಾಜ್ಯ ಸರಕಾರಗಳ ಮೇಲೆ ವರ್ಗಾ ಯಿಸುವ ಮೂಲಕ ಗ್ರಾಮೀಣ ಜನತೆಯ ಉಸಿರಾಗಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನೇ ಕತ್ತು ಹಿಸುಕಿ ಸಾಯಿಸಲು ಹೊರಟಿದೆ ಎಂದು ಮೀನಾಕ್ಷಿ ಸುಂದರಂ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಬಿ.ಎಂ. ಭಟ್ ಕಳೆದ 12 ವರ್ಷಗಳಲ್ಲಿ ದೇಶದ ಸಂಪತ್ತನ್ನು ಸಂಪೂರ್ಣವಾಗಿ ಲೂಟಿ ಮಾಡಿ ಎಲ್ಲಾ ಕ್ಷೇತ್ರವನ್ನು ಕಾರ್ಪೊರೇಟ್ ಕಂಪೆನಿಗಳಿಗೊಪ್ಪಿಸಿದ ನರೇಂದ್ರ ಮೋದಿ ಸರಕಾರವು ಈಗ ಮತ್ತೆ ಜಾತಿ, ಧರ್ಮದ ರಾಜಕಾರಣ ನಡೆಸಿ ದೇಶದ ಜನತೆಯನ್ನು ವಿಭಜಿ ಸುವ ಹುನ್ನಾರ ನಡೆಸುತ್ತಿದೆ. ಅನಾವಶ್ಯಕ ವಿಚಾರಗಳನ್ನು ಚರ್ಚಿಸುವ ಮೂಲಕ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಯತ್ನಿಸುತ್ತಿದೆ. ಸಂಹಿತೆಗಳ ಜಾರಿಯ ಮೂಲಕ ಜನತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಿದೆ ಎಂದು ಆಪಾದಿಸಿದರು.

ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲೆಯ ಪ್ರಮುಖ ನಾಯಕರಾದ ಜೆ. ಬಾಲಕೃಷ್ಣ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು, ವಸಂತ ಆಚಾರಿ, ಯಾದವ ಶೆಟ್ಟಿ, ಪದ್ಮಾವತಿ ಶೆಟ್ಟಿ, ರಮಣಿ ಮೂಡುಬಿದಿರೆ, ಯೋಗೀಶ್ ಜಪ್ಪಿನಮೊಗರು, ನೋಣಯ್ಯ ಗೌಡ ಉಪಸ್ಥಿತರಿದ್ದರು.

*ಕಾರ್ಮಿಕ ಚಳುವಳಿಯ ಹಿರಿಯ ಚೇತನ ಅನಂತ ಸುಬ್ಬರಾವ್‌ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾತು.

*ಜಿಲ್ಲಾದ್ಯಂತ 175 ಕಿ.ಮೀ.ನಷ್ಟು ಕ್ರಮಿಸಿದ ನಾಲ್ಕು ಪಾದಯಾತ್ರೆಗಳ ಪ್ರಮುಖ ನಾಯಕರಾದ ರಾಧಾ ಮೂಡುಬಿದಿರೆ , ನೋಣಯ್ಯ ಗೌಡ, ಬಿ.ಕೆ. ಇಮ್ತಿಯಾಝ್, ಈಶ್ವರಿ ಪದ್ಮುಂಜ, ರೋಹಿದಾಸ್, ರಮೇಶ್ ಉಳ್ಳಾಲ, ರವಿಚಂದ್ರ ಕೊಂಚಾಡಿ, ಜಯಶ್ರೀ, ಲೋಲಾಕ್ಷಿ ಬಂಟ್ವಾಳ, ಶ್ಯಾಮರಾಜ ಪಟ್ರಮೆ, ಪ್ರಮೋದಿನಿ ಕಲ್ಲಾಪು, ರಝಾಕ್ ಮುಡಿಪು, ಜಯಲಕ್ಷ್ಮಿ, ತಯ್ಯುಬ್ ಬೆಂಗರೆ, ಸಾದಿಕ್ ಮುಲ್ಕಿ, ಶ್ರೀನಾಥ್ ಕಾಟಿಪಳ್ಳ, ಪ್ರಮೀಳಾ ಶಕ್ತಿನಗರ ಅವರನ್ನು ಕೆಂಪು ಗುಲಾಬಿ ನೀಡಿ ಗೌರವಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News