ಸಾಮಾಜಿಕ- ಶೈಕ್ಷಣಿಕ ಗಣತಿಗೆ ಶಿಕ್ಷಕರ ಬಳಕೆ; ಮಕ್ಕಳ ಪಠ್ಯ ಚಟುವಟಿಕೆಗೆ ತೊಂದರೆ ಆಗದು: ಸಚಿವ ಮಧು ಬಂಗಾರಪ್ಪ
ಮಂಗಳೂರು, ಅ.8: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ ಶೈಕ್ಷಣಿಕ ಗಣತಿಗೆ ಶಿಕ್ಷಕರ ಬಳಕೆಗಾಗಿ ರಜೆಯನ್ನು ಅ.18ರವರೆಗೆ ವಿಸ್ತರಿಸಿರುವುದರಿಂದ ಮಕ್ಕಳ ಪಠ್ಯ ಚಟುವಟಿಕೆಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ನಡೆದ ಹಿಂದುಳಿದ ವರ್ಗಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಲಾ ವಾರ್ಷಿಕ ಕ್ಯಾಲೆಂಡರ್‌ನಂತೆ 240 ದಿನಗಳಿವೆ. ಆರ್‌ಟಿಇ ಕಾಯ್ದೆ ಪ್ರಕಾರ 220 ದಿನಗಳನ್ನು ಕಡ್ಡಾಯವಾಗಿ ಬಳಸಬೇಕಾಗಿದೆ. ಇದೀಗ 9 ದಿನಗಳವರೆಗೆ ಸಮೀಕ್ಷೆಯನ್ನು ವಿಸ್ತರಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆದೇಶಿಸಿದ್ದಾರೆ. ರಾಜ್ಯ ಶಿಕ್ಷಕರ ಸಂಘದ ಸಲಹೆಯ ಮೇರೆಗೆ ಮುಖ್ಯಮಂತ್ರಿ ಈ ನಿರ್ಧಾರ ಮಾಡಿದ್ದಾರೆ ಎಂದರು.
ದ.ಕ. ಜಿಲ್ಲೆಯಲ್ಲಿ ಮಳೆಯಿಂದಾಗಿ ಈಗಾಗಲೇ ಹಲವು ದಿನಗಳು ಹೆಚ್ಚುವರಿ ರಜೆಯಾಗಿರುವ ಕಾರಣ ಆ ದಿನಗಳನ್ನು ಹೇಗೆ ಸರಿತೂಗಿಸಲಾಗುತ್ತದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಈ ಬಗ್ಗೆ ಶಿಕ್ಷಕರು ನಿಗದಿತ ಅವಧಿಯಲ್ಲಿ ಪಠ್ಯಗಳನ್ನು ಪೂರೈಸಲು ಕ್ರಮ ವಹಿಸಲು ಜಿಲ್ಲಾಡಳಿತದ ಮೂಲಕ ಸೂಚನೆ ನೀಡಲಾಗಿದೆ ಎಂದವರು ಹೇಳಿದರು.
ಸಮೀಕ್ಷೆ ಅವಧಿ ಮತ್ತೆ ವಿಸ್ತರಣೆಗೊಂಡರೆ ಶಿಕ್ಷಕರನ್ನು ಬಳಸಿಕೊಳ್ಳಲು ಇಲಾಖೆ ಅವಕಾಶ ನೀಡಲಿದೆಯೇ ಎಂಬ ಪ್ರಶ್ನೆಗೆ, ನಮ್ಮ ಶಿಕ್ಷಕರು ಪ್ರಸಕ್ತ ವಿಸ್ತರಿತ ಅವಧಿವರೆಗೆ ಮಾತ್ರವೇ ಪಾಲ್ಗೊಳ್ಳಲಿದ್ದಾರೆ. ಈ ಅವಧಿಯಲ್ಲಿ ಸಮೀಕ್ಷೆ ಪೂರ್ಣಗೊಳ್ಳುವ ಭರವಸೆ ಇದೆ. ಒಂದು ವೇಳೆ ಬಾಕಿ ಆಗಿದ್ದಲ್ಲಿ ಮುಂದೆ ಆನ್‌ಲೈನ್ ಮೂಲಕ ಗ್ರಾಮ ಪಂಚಾಯತ್ ವಿಎ ಅಥವಾ ಪಿಡಿಒಗಳ ಮೂಲಕ ನಡೆಸುವ ಕುರಿತಂತೆಯೂ ಚಿಂತನೆ ನಡೆಸಲಾಗಿದೆ. ಅದರ ಬಗ್ಗೆ ಮುಂದೆ ಸರಕಾರ ನಿರ್ಧಾರ ಮಾಡಲಿದೆ. ಈಗಾಗಲೇ ರಾಜ್ಯದಲ್ಲಿ ಒಟು ಶೇ. 81ರಷ್ಟು ಸಮೀಕ್ಷೆ ಪೂರ್ಣವಾಗಿದೆ. ಬೆಂಗಳೂರಿನಲ್ಲಿ ಇದು ಕ್ಷೀಣವಾಗಿದ್ದು, ಶೇ. 38ರಷ್ಟು ಮಾತ್ರವೇ ಆಗಿದೆ. ಅಲ್ಲಿ ಸಮೀಕ್ಷೆ ಆರಂಭಗೊಂಡಿರುವುದೇ ಅ. 4ರಿಂದ. ದ.ಕ. ಜಿಲ್ಲೆಯಲ್ಲಿ ನಿನ್ನೆವರೆಗೆ ಶೇ. 68ರಷ್ಟು, ಉಡುಪಿಯಲ್ಲಿ ಶೇ. 62ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಮಂಗಳೂರು ನಗರದಲ್ಲಿ ಸುಮಾರು 12000 ಮಂದಿ ಜನರು ನಿವಾಸ ಹೊಂದಿದ್ದರೂ ಬಹುತೇಕರು ವಿದೇಶದಲ್ಲಿ ದ್ದಾರೆ. ನಿಯಮದ ಪ್ರಕಾರ ಅವರ ಸಮೀಕ್ಷೆಗೆ ಸೂಚನೆ ನೀಡಲಾಗಿದೆ. ರಾಜ್ಯದ ಜನರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಯಡಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಪ್ರಣಾಳಿಕೆಯಲ್ಲಿಯೇ ಕಾಂಗ್ರೆಸ್ ಆಶ್ವಾಸನೆ ನೀಡಿದ್ದು, ಅದರಂತೆ ಗಣತಿ ಕಾರ್ಯವನ್ನು ನಡೆಸಲಾಗುತ್ತಿದೆ. ಸಮಾಜದಲ್ಲಿ ಸಮಾನತೆ, ಮಾನವೀಯ ತೆಯ ಮೌಲ್ಯ ದೊರೆಯಲು ಸಮೀಕ್ಷೆ ಆಧಾರವಾಗಲಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಅವರು ಹೇಳಿದರು.
ಗೋಷ್ಟಿಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮುಖಂಡರಾದ ವೇಣೂರು ಗೋಪಾಲಕೃಷ್ಣ, ಎ.ಎಸ್. ರವಿ, ಭೀಮಣ್ಣ, ಪ್ರದೀಪ್ ಈಶ್ವರ್, ಪಿ.ವಿ. ಮೋಹನ್, ಅಶೋಕ್‌ಕುಮಾರ್, ಪದ್ಮರಾಜ್, ವಿಶ್ವಾಸ್‌ದಾಸ್, ಮಂಜುನಾಥ್ ಪೂಜಾರಿ, ರಕ್ಷಿತ್ ಶಿವರಾಂ, ರಾಜು ಪೂಜಾರಿ, ಮಮತಾ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಮೀಕ್ಷೆ ವಿರೋಧಿಸುವುದು ಜನವಿರೋಧಿ ಕೃತ್ಯ
ರಾಜ್ಯದಲ್ಲಿ ನಡೆಯುತ್ತಿರುವುದು ಜಾತಿ ಗಣತಿ ಅಲ್ಲ. ಅದು ರಾಜ್ಯದ ಏಳು ಕೋಟಿ ಜನರ ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಸಮೀಕ್ಷೆಯಾಗಿದೆ. ಹಿಂದುಳಿದ ವರ್ಗಗಳ ಸಮುದಾಯಗಳಲ್ಲಿ ಸಂವಿಧಾನ ಬದ್ಧ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ 10 ವರ್ಷಗಳಿಗೊಮ್ಮೆ ನಡೆಸಲಾಗುವ ಸಮೀಕ್ಷೆ ಇದಾಗಿದೆ ಎಂದು ಮಾಜಿ ಸಭಾಪತಿ ಸುದರ್ಶನ್ ಹೇಳಿದರು.
ಹಿಂದುಳಿದ ವರ್ಗಗಳ ಒಕ್ಕೂಟದ ಆಶ್ರಯದಲ್ಲಿ 200 ಸಮುದಾಯಗಳಿವೆ. ಪ್ರಥಮ ಸಭೆ ಇಂದು ಮಂಗಳೂರಿನಲ್ಲಿ ನಡೆಸಲಾಗಿದೆ. ಸಮೀಕ್ಷೆ ಬಗ್ಗೆ ಬಿಜೆಪಿ ನಾಯಕರು ರಾಜಕೀಯ ಕಾರಣಗಳಿಗೋಸ್ಕರ ಮಾತ್ರವೇ ವಿರೋಧಿಸುತ್ತಿ ದ್ದಾರೆ. ಸಮೀಕ್ಷೆ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ನಡೆಯುತ್ತಿದೆ. ಇಂತಹ ವಿರೋಧ ಸಂವಿಧಾನ ಹಾಗೂ ಜನ ವಿರೋಧಿ ಕೃತ್ಯ ಎಂದವರು ಹೇಳಿದರು.
ಸಮೀಕ್ಷೆಯಲ್ಲಿ ಲೋಪದೋಷಗಳು ಸಹಜ. ಅದನ್ನು ಸಂಬಂಧಪಟ್ಟವರ ಗಮನ ಹರಿಸಿ ಸರಿಪಡಿಸಬೇಕು. ಹಾಗೆಂದು ಪ್ರಹ್ಲಾದ್ ಜೋಶಿಯಂತಹ ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಬಿಜೆಪಿ ನಾಯಕರು ಸಮೀಕ್ಷೆಗೆ ವಿರೋಧ ವ್ಯಕ್ತಪಡಿ ಸುವುದು ಬೇಜವಾಬ್ಧಾರಿಯ ನಡೆ. ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ ಸುದರ್ಶನ್.
ಕೇಂದ್ರ ಸರಕಾರ ಕಾಂಗ್ರೆಸ್‌ನ ಒತ್ತಾಯದ ಮೇರೆಗೆ ಜನಗಣತಿಗೆ ಮುಂದಾಗಿದೆ. 2021ರಲ್ಲಿ ಜನಗಣತಿ ಆಗಬೇಕಾಗಿತ್ತು. ಕೋವಿಡ್ ಕಾರಣ ಹೇಳಿ ವಿಳಂಬವಾಗಿದೆ. ತಡವಾದರೂ ಜನಗಣತಿ ಮುಂದಾಗಿರುವುದನ್ನು ನಾವು ಸ್ವಾಗತಿಸುತೇವೆ ಎಂದವರು ಹೇಳಿದರು.