ರಾಷ್ಟ್ರ ರಾಜಧಾನಿಯಲ್ಲಿ ನೆರೆ ಪರಿಸ್ಥಿತಿ: ಸರ್ಕಾರಿ ಅಧಿಕಾರಿಗಳ ರಜೆ ರದ್ದು ಪಡಿಸಿದ ದಿಲ್ಲಿ ಸಿಎಂ ಕೇಜ್ರಿವಾಲ್
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ದಾಖಲೆ ಪ್ರಮಾಣದ ಮಳೆ ಸುರಿಯುತ್ತಿದ್ದು, ದಿಲ್ಲಿಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಎಲ್ಲಾ ಸರ್ಕಾರಿ ಅಧಿಕಾರಿಗಳ ರಜೆಯನ್ನು ರದ್ದುಗೊಳಿಸಿದ್ದು, ನಗರದಾದ್ಯಂತ ಜಲಾವೃತ ಸಮಸ್ಯೆಯನ್ನು ಪರಿಶೀಲಿಸಲು ಸೂಚನೆ ನೀಡಿದ್ದಾರೆ.
1982 ರ ಬಳಿಕ ಇದೇ ಮೊದಲ ಬಾರಿಗೆ ದಿಲ್ಲಿಯಲ್ಲಿ ಈ ಪ್ರಮಾಣದ ಮಳೆ ಸುರಿದಿದ್ದು, ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಕೇಜ್ರಿವಾಲ್ “ನಿನ್ನೆ ದೆಹಲಿಯಲ್ಲಿ 126 ಮಿ.ಮೀ ಮಳೆಯಾಗಿದೆ. ಮುಂಗಾರು ಹಂಗಾಮಿನ ಒಟ್ಟು ಮಳೆಯ ಶೇಕಡಾ 15 ರಷ್ಟು ಕೇವಲ 12 ಗಂಟೆಗಳಲ್ಲಿ ಬಿದ್ದಿದೆ. ನೀರು ನಿಂತಿದ್ದರಿಂದ ಜನರು ತುಂಬಾ ಕಂಗಾಲಾಗಿದ್ದಾರೆ. ಇಂದು ದಿಲ್ಲಿಯ ಎಲ್ಲಾ ಸಚಿವರು ಮತ್ತು ಮೇಯರ್ ಸಮಸ್ಯೆ ಇರುವ ಪ್ರದೇಶಗಳನ್ನು ಪರಿಶೀಲಿಸುತ್ತಾರೆ. ರವಿವಾರದ ರಜೆಯನ್ನು ರದ್ದುಪಡಿಸಿ ಗ್ರೌಂಡ್‌ಗೆ ಇಳಿಯುವಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ತಿಳಿಸಿದ್ದಾರೆ.\
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, 24 ಗಂಟೆಗಳ ಅವಧಿಯಲ್ಲಿ ದಿಲ್ಲಿಯಲ್ಲಿ 153 ಮಿಮೀ ಮಳೆ ದಾಖಲಾಗಿದೆ. ಭಾರೀ ಮಳೆಯಿಂದಾಗಿ ನಗರದಾದ್ಯಂತ ವ್ಯಾಪಕ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಉದ್ಯಾನವನಗಳು, ಅಂಡರ್‌ಪಾಸ್‌ಗಳು, ಮಾರುಕಟ್ಟೆಗಳು ಮತ್ತು ಆಸ್ಪತ್ರೆ ಆವರಣಗಳು ಕೂಡಾ ನೀರಿನಲ್ಲಿ ಮುಳುಗಿವೆ.
ದಿಲ್ಲಿ ನಿವಾಸಿಗಳು ಮೊಣಕಾಲು ಮುಳುಗುವಷ್ಟು ನೀರಿನಲ್ಲಿ ನಡೆಯುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಂಡುಬಂದಿದ್ದು, ಇದು ನಗರದ ಒಳಚರಂಡಿ ಅವ್ಯವಸ್ಥೆಯನ್ನು ಬೊಟ್ಟು ಮಾಡಿದೆ.
ಜಲಾವೃತದ ಜೊತೆಗೆ, ಮಳೆ ಮತ್ತು ಬಲವಾದ ಗಾಳಿಯಿಂದಾಗಿ ನಗರದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಮತ್ತು ಇಂಟರ್ನೆಟ್ ಸಂಪರ್ಕದಲ್ಲಿ ಅಡಚಣೆ ಉಂಟಾಗಿದೆ ಎಂದು ndtv.com ವರದಿ ಮಾಡಿದೆ.